ADVERTISEMENT

IPL-2021 | RCB vs KKR: ಸೋಲು ಮರೆತು ಗೆಲುವಿನತ್ತ ಸಾಗುವ ಛಲ

ರಾಯಲ್ ಚಾಲೆಂಜರ್ಸ್ ಬೆಂಗಳೂರು–ಕೋಲ್ಕತ್ತ ನೈಟ್ ರೈಡರ್ಸ್‌ ಹಣಾಹಣಿ ಇಂದು

ಪಿಟಿಐ
Published 2 ಮೇ 2021, 20:03 IST
Last Updated 2 ಮೇ 2021, 20:03 IST
ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌
ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌   

ಅಹಮದಾಬಾದ್: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್‌ನ ಮೊದಲ ಸುತ್ತಿನಲ್ಲಿ ಹತ್ತು ಅಂಕ ಗಳಿಸಿದೆ.

ಏಳು ಪಂದ್ಯಗಳಲ್ಲಿ ಐದು ಗೆಲುವು, ಎರಡು ಸೋಲುಂಡಿರುವ ತಂಡವು ಸೋಮವಾರ ಎರಡನೇ ಸುತ್ತಿನ ಹೋರಾಟ ಆರಂಭಿಸಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಆಡಲಿದೆ. ಪ್ರಥಮ ಸುತ್ತಿನಲ್ಲಿ ಏಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತ ಎದುರು ಕೊಹ್ಲಿ ಬಳಗವು ಗೆದ್ದಿತ್ತು.

ಎರಡು ದಿನಗಳ ಹಿಂದೆ ಕೊಹ್ಲಿ ಬಳಗವು ಪಂಜಾಬ್ ವಿರುದ್ಧ ಸೋತಿತ್ತು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದೇವದತ್ತ ಪಡಿಕ್ಕಲ್ ಅವರು ಎರಡಂಕಿ ಗಳಿಸುವಲ್ಲಿ ವಿಫಲರಾಗಿದ್ದರು. ಕೊಹ್ಲಿ ಮತ್ತು ರಜತ್ ಪಾಟೀದಾರ್ ಅವರಿಬ್ಬರೂ ನಿಧಾನಗತಿಯಲ್ಲಿ ರನ್ ಗಳಿಸಿದ್ದರು. ಹರ್ಷಲ್ ಪಟೇಲ್ ಮತ್ತು ಕೈಲ್ ಜೆಮಿಸನ್ ಅವರು ಕೊನೆಯ ಹಂತದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಆದರೆ ಹರ್ಷಲ್ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರು. ಜೆಮಿಸನ್ ಹೆಚ್ಚು ರನ್‌ ಕೊಟ್ಟರೂ ಎರಡು ವಿಕೆಟ್ ಗಳಿಸಿದ್ದರು. ಮೊಹಮ್ಮದ್ ಸಿರಾಜ್, ಶಾಬಾಜ್ ಅಹಮದ್ ಮತ್ತು ಡೇನಿಯಲ್ ಸ್ಯಾಮ್ಸ್‌ ಅವರು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರೆ ಎದುರಾಳಿ ಬ್ಯಾಟಿಂಗ್‌ ಬಲವನ್ನು ಕಟ್ಟಿಹಾಕುವುದು ಸುಲಭವಾಗಬಹುದು.

ADVERTISEMENT

ಅದರೆ ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತಿರುವ ಕೋಲ್ಕತ್ತ ತಂಡಕ್ಕೆ ಮುಂದಿನ ಹಂತವು ಪ್ರಮುಖವಾಗಲಿದೆ. ಉಳಿದಿರುವ ಪಂದ್ಯಗಳಲ್ಲಿ ಕನಿಷ್ಠ ಆರರಲ್ಲಿ ಜಯಿಸಿದರೆ ಪ್ಲೇ ಆಫ್‌ ಕನಸು ಜೀವಂತವಾಗಿಡಬಹುದು.

ಅದಕ್ಕಾಗಿ ಸ್ವತಃ ನಾಯಕ ಮಾರ್ಗನ್, ಆ್ಯಂಡ್ರೆ ರಸೆಲ್, ನಿತೀಶ್ ರಾಣಾ ಮತ್ತು ರಾಹುಲ್ ತ್ರಿಪಾಠಿ ಅವರು ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳುವುದು ಅವಶ್ಯಕ. ಪ್ಯಾಟ್‌ ಕಮಿನ್ಸ್‌ ಆಲ್‌ರೌಂಡರ್ ಆಗಿ ತಮ್ಮ ಕಾರ್ಯವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಉಳಿದ ಬೌಲರ್‌ಗಳು ಅವರಿಗೆ ತಕ್ಕ ಜೊತೆ ನೀಡಿದರೆ ಕೊಹ್ಲಿ ಪಡೆಗೆ ದಿಟ್ಟ ಸವಾಲೊಡ್ಡಬಹುದು.

ಉಭಯ ತಂಡಗಳಲ್ಲಿರುವ ಯುವ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದೇವದತ್ತ ಪಡಿಕ್ಕಲ್ ಮತ್ತು ಶುಭಮನ್ ಗಿಲ್ ಅವರ ಮೇಲೂ ಎಲ್ಲರ ಗಮನ ನೆಟ್ಟಿದೆ.

ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೆಟ್‌ಕೀಪರ್), ದೇವದತ್ತ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಹರ್ಷಲ್ ಪಟೇಲ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಕೈಲ್ ಜೆಮೀಸನ್, ಡ್ಯಾನ್ ಕ್ರಿಸ್ಟಿಯನ್, ಶಾಬಜ್ ಅಹಮದ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಡೇನಿಯಲ್ ಸ್ಯಾಮ್ಸ್‌.

ಕೋಲ್ಕತ್ತ ನೈಟ್ ರೈಡರ್ಸ್: ಏಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಶುಭಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್, ಸುನೀಲ್ ನಾರಾಯಣ್, ಆ್ಯಂಡ್ರೆ ರಸೆಲ್, ಶಿವಂ ಮಾವಿ, ಪ್ಯಾಟ್ ಕಮಿನ್ಸ್, ಪ್ರಸಿದ್ಧ ಕೃಷ್ಣ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಹರಭಜನ್ ಸಿಂಗ್, ಕುಲದೀಪ್ ಯಾದವ್, ಸಂದೀಪ್ ವರಿಯರ್.

ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.