ಅಹಮದಾಬಾದ್: ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪ್ರತಿನಿಧಿಸುತ್ತಿರುವ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಹೀಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು (ಸೋಮವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ನಡುವೆ ನಡೆಯಬೇಕಿರುವ ಪಂದ್ಯಮುಂದೂಡಿಕೆಯಾಗಿದೆ ಎಂದು ವರದಿಯಾಗಿದೆ.
ಆರ್‌ಸಿಬಿ ಮತ್ತು ಕೆಕೆಆರ್ ನಡುವಣ ಪಂದ್ಯವನ್ನು ಮರುನಿಗದಿ ಮಾಡಲಾಗಿದೆ ಎಂದು ‘ಇಎಸ್‌ಪಿಎನ್ ಕ್ರಿಕ್ ಇನ್ಫೊ’ ಟ್ವೀಟ್ ಮಾಡಿದೆ.ಆದರೆ, ಮುಂದಿನ ದಿನಾಂಕ ಯಾವುದು? ಮುಂದಿನ ಪಂದ್ಯ ಎಲ್ಲಿ ನಡೆಯಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಈ ಮಧ್ಯೆ, ಪಂದ್ಯವನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುವುದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳ ಹೇಳಿಕೆ ಉಲ್ಲೇಖಿಸಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಕೆಕೆಆರ್ ತಂಡದ ಆಟಗಾರರಿಗೆ ಕೋವಿಡ್ ದೃಢಪಟ್ಟಿರುವ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಈ ಹಿಂದೆಯೇ ಮಾಹಿತಿ ನೀಡಿದ್ದರು. ಈ ಕಾರಣದಿಂದ ಪಂದ್ಯ ಮುಂದೂಡಿಕೆಯಾಗಬಹುದು ಎಂದು ಸುಳಿವು ನೀಡಿದ್ದರು.
ಕೋವಿಡ್ ಸಾಂಕ್ರಾಮಿಕದ ನಡುವೆಯೂ ‘ಬಯೋ ಬಬಲ್’ ವ್ಯವಸ್ಥೆಯಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿದೆ. ಕಟ್ಟುನಿಟ್ಟಿನ ನಿಯಮಾನುಸಾರ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇಷ್ಟಾದರೂ ಆಟಗಾರರಿಗೆ ಕೋವಿಡ್ ತಗುಲಿರುವುದು ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡವು ಈ ಬಾರಿಯ ಐಪಿಎಲ್‌ನ ಮೊದಲ ಸುತ್ತಿನಲ್ಲಿ ಹತ್ತು ಅಂಕ ಗಳಿಸಿದೆ. ಏಳು ಪಂದ್ಯಗಳಲ್ಲಿ ಐದು ಗೆಲುವು, ಎರಡು ಸೋಲುಂಡಿರುವ ತಂಡವು ಇಂದು ಎರಡನೇ ಸುತ್ತಿನ ಹೋರಾಟ ಆರಂಭಿಸಬೇಕಿತ್ತು. ಆದರೆ ಕೋವಿಡ್ ಕಾರಣ ಇದು ಮುಂದೂಡಿಕೆಯಾಗಿದೆ. ಪ್ರಥಮ ಸುತ್ತಿನಲ್ಲಿ ಏಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತ ಎದುರು ಕೊಹ್ಲಿ ಬಳಗವು ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.