ADVERTISEMENT

IPL 2022 | 'ಕೊನೇ ಎಸೆತ'ದಲ್ಲಿ ಹೆಚ್ಚು ಜಯ: ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 5:42 IST
Last Updated 22 ಏಪ್ರಿಲ್ 2022, 5:42 IST
ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು (ಪಿಟಿಐ ಚಿತ್ರ)
ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು (ಪಿಟಿಐ ಚಿತ್ರ)   

ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಐಪಿಎಲ್‌ ಪಂದ್ಯದಲ್ಲಿ ಕೊನೇ ಎಸೆತದಲ್ಲಿ ಜಯ ಸಾಧಿಸಿತು. ಇದರೊಂದಿಗೆ ಐಪಿಎಲ್‌ನಲ್ಲಿ ಗುರಿ ಬೆನ್ನತ್ತುವ ವೇಳೆ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಹೆಚ್ಚು ಸಲ ಗೆಲುವಿನ ರನ್‌ ಬಾರಿಸಿದ ತಂಡ ಎಂಬ ಶ್ರೇಯಕ್ಕೆ ಭಾಜನವಾಯಿತು.

ಇಲ್ಲಿನ ಡಿ.ವೈ. ಪಾಟೀಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಚೆನ್ನೈ ತಂಡದ ನಾಯಕ ಜಡೇಜಾ, ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್‌ ಆರಂಭಿಸಿದ ಮುಂಬೈ, ತಿಲಕ್‌ ವರ್ಮಾ (51*) ಗಳಿಸಿದ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 155 ರನ್‌ ಗಳಿಸಿತು.

ಈ ಗುರಿ ಮುಟ್ಟಲು ಚೆನ್ನೈ ತಂಡ ಪರದಾಡಿತು. ಕನ್ನಡಿಗ ರಾಬಿನ್‌ ಉತ್ತಪ್ಪ (30) ಮತ್ತು ಅಂಬಟಿ ರಾಯುಡು (40) ಹೊರತು ಪಡಿಸಿ ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ಉಳಿದ ಬ್ಯಾಟರ್‌ಗಳಿಂದ ಉತ್ತಮ ಆಟ ಮೂಡಿಬರಲಿಲ್ಲ. ಹೀಗಾಗಿ ಕೊನೆವರೆಗೂ ಸಮಬಲದ ಹೋರಾಟ ಕಂಡುಬಂದಿತು.

ADVERTISEMENT

19 ಓವರ್‌ಗಳ ಅಂತ್ಯಕ್ಕೆ ಚೆನ್ನೈ 6 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿತ್ತು.ಕೊನೆಯ ಓವರ್‌ನಲ್ಲಿ ಗೆಲುವಿಗೆ 17 ರನ್‌ ಬೇಕಿತ್ತು. 13 ಎಸೆತಗಳಲ್ಲಿ 22 ರನ್ ಬಾರಿಸಿದ್ದ ಡ್ವೇನ್‌ ಪ್ರೆಟೋರಿಯಸ್‌ ಮತ್ತು 9 ಎಸೆತಗಳಲ್ಲಿ 12 ರನ್‌ ಗಳಿಸಿದ್ದ ಮಹೇಂದ್ರ ಸಿಂಗ್‌ ಧೊನಿ ಕ್ರೀಸ್‌ನಲ್ಲಿದ್ದರು.

ಇನಿಂಗ್ಸ್‌ನ 20ನೇ ಓವರ್‌ ಎಸೆದ ಜಯದೇವ್‌ ಉನದ್ಕತ್‌ ಮೊದಲ ಎಸೆತದಲ್ಲಿ ಪ್ರೆಟೋರಿಯಸ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು. ಬಳಿಕ ಕ್ರೀಸ್‌ಗೆ ಬಂದ ಡ್ವೇನ್‌ ಬ್ರಾವೋ ಎರಡನೇ ಎಸೆತದಲ್ಲಿ 1 ರನ್ ಗಳಿಸಿ, ಧೊನಿಗೆ ಸ್ಟ್ರೈಕ್‌ ನೀಡಿದರು.

ಉಳಿದ ನಾಲ್ಕು ಎಸೆತಗಳಲ್ಲಿ 16 ರನ್‌ ಬೇಕಿತ್ತು. ಈ ವೇಳೆ ಸ್ಫೋಟಕ ಆಟವಾಡಿದ ಧೋನಿ ಕ್ರಮವಾಗಿ 3 ಮತ್ತು 4ನೇ ಎಸೆತದಲ್ಲಿ ಸಿಕ್ಸರ್‌ ಮತ್ತು ಬೌಂಡರಿಗೆ ಅಟ್ಟಿದರು. ಉಳಿದ ಎರಡು ಎಸೆತಗಳಲ್ಲಿ 2 ರನ್‌ ಮತ್ತು ಬೌಂಡರಿ ಸಿಡಿಸಿ ಪಂದ್ಯ ಮುಗಿಸಿದರು.

ಇದರೊಂದಿಗೆ ಚೆನ್ನೈ ತಂಡ ಈ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು. ಇತ್ತ ಮುಂಬೈ ಸತತ ಏಳನೇ ಪಂದ್ಯದಲ್ಲಿಯೂ ಸೋಲಿಗೆ ಶರಣಾಯಿತು.

8 ಸಲ ಕೊನೇ ಎಸೆತದಲ್ಲಿ ಗೆಲುವು
ಈ ಪಂದ್ಯವೂ ಸೇರಿದಂತೆಚೆನ್ನೈ ತಂಡಐಪಿಎಲ್‌ನಲ್ಲಿ ಇದುವರೆಗೆ 8 ಸಲ ಕೊನೇ ಎಸೆತದಲ್ಲಿ ಗೆಲುವಿನ ರನ್‌ ಬಾರಿಸಿದೆ. ನಂತರದ ಸ್ಥಾನದಲ್ಲಿ, ಆರು ಸಲ ಗೆದ್ದಿರುವ ಮುಂಬೈ ಇದೆ.ರಾಜಸ್ಥಾನ ರಾಯಲ್ಸ್‌ 4 ಬಾರಿ ಜಯಿಸಿದೆ. ಪಂಜಾಬ್‌ ಕಿಂಗ್ಸ್ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಲಾ ಮೂರು ಸಲ ಈ ಸಾಧನೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.