ADVERTISEMENT

IPL 2022 RCB vs PBKS: ಡುಪ್ಲೆಸಿ 88, ಕೊಹ್ಲಿ 41*; ಆರ್‌ಸಿಬಿ 205/2

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 15:47 IST
Last Updated 27 ಮಾರ್ಚ್ 2022, 15:47 IST
ಫಫ್ ಡುಪ್ಲೆಸಿ
ಫಫ್ ಡುಪ್ಲೆಸಿ   

ಮುಂಬೈ: ನಾಯಕ ಫಫ್ ಡುಪ್ಲೆಸಿ (88) ಹಾಗೂ ವಿರಾಟ್ ಕೊಹ್ಲಿ (41*) ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ 20 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ಕೊನೆಯ ಹಂತದಲ್ಲಿ ದಿನೇಕ್ ಕಾರ್ತಿಕ್ (32*) ಕೂಡ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು.

ಟಾಸ್ ಸೋತರೂ ಆರ್‌ಸಿಬಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ನಾಯಕ ಡುಪ್ಲೆಸಿ ಹಾಗೂ ಅನುಜ್ ರಾವತ್ (21) ಉತ್ತಮ ಆರಂಭವೊದಗಿಸಿದರು. ಮೊದಲ ವಿಕೆಟ್‌ಗೆ 50 ರನ್ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು.

ADVERTISEMENT

ಡುಪ್ಲೆಸಿ-ಕೊಹ್ಲಿ ಶತಕದ ಜೊತೆಯಾಟ...
ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆ ಸೇರಿದ ಫಫ್ ತಂಡವನ್ನು ಮುನ್ನಡೆಸಿದರು. ನಾಯಕ ಸ್ಥಾನವನ್ನು ತ್ಯಜಿಸಿದ ಕೊಹ್ಲಿ ಒತ್ತಡ ರಹಿತವಾಗಿ ಬ್ಯಾಟ್ ಬೀಸಿದರು.

ಇನ್ನೊಂದೆಡೆ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಫಫ್, ಬಳಿಕ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ 41 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

ಈ ಮೂಲಕ ಐಪಿಎಲ್‌ನಲ್ಲಿ 3,000 ರನ್‌ಗಳ ಮೈಲಿಗಲ್ಲು ತಲುಪಿದರು. ಅಲ್ಲದೆ ಕೊಹ್ಲಿ ಜೊತೆಗೆ ಶತಕದ ಜೊತೆಯಾಟದಲ್ಲಿ (118) ಭಾಗಿಯಾದರು.

ಪಂಜಾಬ್ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಿದ ಫಫ್, ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದರು. ಆದರೆ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 12 ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡರು.

57 ಎಸೆತಗಳನ್ನು ಎದುರಿಸಿದ ಫಫ್ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್ ನೆರವಿನಿಂದ 88 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಕೇವಲ 14 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಹಾಗೂ ಬೌಂಡರಿಗಳಿಂದ ಅಜೇಯ 32 ರನ್ ಗಳಿಸಿದ ಕಾರ್ತಿಕ್ ಆರ್‌ಸಿಬಿ 205 ಮೊತ್ತ ಪೇರಿಸಲು ನೆರವಾದರು.

ಇನ್ನೊಂದೆಡೆ ಕೊಹ್ಲಿ 29 ಎಸೆತಗಳಲ್ಲಿ 41 ರನ್ ಗಳಿಸಿ (1 ಬೌಂಡರಿ, 2 ಸಿಕ್ಸರ್) ಔಟಾಗದೆ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.