ADVERTISEMENT

'ಕ್ವಾಲಿಫೈಯರ್ 1' ಖಚಿತಪಡಿಸಿದ ಗುಜರಾತ್; ಫೈನಲ್‌ಗೆ ಲಗ್ಗೆಯಿಡಲು ಎರಡು ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2022, 10:34 IST
Last Updated 16 ಮೇ 2022, 10:34 IST
ಗುಜರಾತ್ ಟೈಟನ್ಸ್
ಗುಜರಾತ್ ಟೈಟನ್ಸ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಗುಜರಾತ್ ಟೈಟನ್ಸ್, ಪ್ಲೇ-ಆಫ್‌ನಲ್ಲಿ 'ಕ್ವಾಲಿಫೈಯರ್ 1'ರಲ್ಲಿ ಆಡುವುದನ್ನು ಖಚಿತಪಡಿಸಿದೆ.

ಈ ಮೂಲಕ ಫೈನಲ್‌ಗೆ ಪ್ರವೇಶಿಸಲು ಎರಡು ಅವಕಾಶ ಸಿಗಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋಲು ಅನುಭವಿಸಿದರೂ ಎರಡನೇ ಕ್ವಾಲಿಫೈಯರ್‌ನಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಡಲು ಅವಕಾಶ ದೊರೆಯಲಿದೆ.

ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳು 'ಕ್ವಾಲಿಫೈಯರ್ 1'ರಲ್ಲಿ ಸೆಣಸಲಿವೆ. ಹೀಗಾಗಿ ಗುಜರಾತ್ ವಿರುದ್ಧ ಯಾವ ತಂಡ ಸ್ಪರ್ಧಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಸ್ಪರ್ಧಿಸುತ್ತಿರುವ ಹಾರ್ದಿಕ್ ಪಾಂಡ್ಯ ಬಳಗವು, ಈವರೆಗೆ ಆಡಿರುವ 13 ಪಂದ್ಯಗಳಲ್ಲಿ 10 ಗೆಲುವಿನೊಂದಿಗೆ ಒಟ್ಟು 20 ಅಂಕಗಳನ್ನು ಸಂಪಾದಿಸಿದೆ.

ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ 13 ಪಂದ್ಯಗಳಲ್ಲಿ ತಲಾ 16 ಅಂಕಕಲೆ ಹಾಕಿದರೂ ರನ್ ರೇಟ್ ಲೆಕ್ಕಾಚಾರದಲ್ಲಿ ಸಂಜು ಸ್ಯಾಮ್ಸನ್ ಪಡೆ ಎರಡನೇ ಸ್ಥಾನದಲ್ಲಿದೆ. ಈ ತಂಡಗಳ ಪ್ಲೇ-ಆಫ್ ಪ್ರವೇಶವು ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸಹ ಪ್ಲೇ-ಆಫ್ ರೇಸ್‌ನಲ್ಲಿವೆ. ಹಾಗಾಗಿ ಉಳಿದ ಮೂರು ಸ್ಥಾನಗಳಿಗಾಗಿ ಏಳು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನೊಂದೆಡೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೂರ್ನಿಯಿಂದಲೇ ನಿರ್ಗಮಿಸಿದೆ.

ಕ್ವಾಲಿಫೈಯರ್ 1 (ಮೇ 24) ಹಾಗೂ ಎಲಿಮಿನೇಟರ್ (ಮೇ 25) ಹಣಾಹಣಿಯು ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ (ಮೇ 27) ಹಾಗೂ ಫೈನಲ್ (ಮೇ 29) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ.

ಅಂಕಪಟ್ಟಿ ಇಂತಿದೆ (63ನೇ ಪಂದ್ಯ ಅಂತ್ಯಕ್ಕೆ):

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.