ADVERTISEMENT

IPL 2022 GT vs LSG: ಲಖನೌಗೆ ಸೋಲಿನ ಕಹಿ; ಗುಜರಾತ್ ಜಯಭೇರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 17:58 IST
Last Updated 28 ಮಾರ್ಚ್ 2022, 17:58 IST
ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್
ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಸೂಪರ್ ಜೈಂಟ್ಸ್, ದೀಪಕ್ ಹೂಡಾ (55) ಹಾಗೂ ಯುವ ಬ್ಯಾಟರ್ ಆಯುಷ್ ಬದೋನಿ (54) ಸಮಯೋಚಿತ ಅರ್ಧಶತಕಗಳ ನೆರವಿನಿಂದ 158 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್, ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಗುರಿ ತಲುಪಿತು.

ADVERTISEMENT

ಐಪಿಎಲ್‌ನ ಎರಡು ಹೊಸ ತಂಡಗಳು ಇದೇ ಮೊದಲ ಬಾರಿಗೆ ಕಣಕ್ಕಿಳಿದಿತ್ತು.

ಸವಾಲಿನ ಮೊತ್ತ ಬೆನ್ನಟ್ಟಿದ ಗುಜರಾತ್ ಆರಂಭ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್ (0) ಹಾಗೂ ವಿಜಯ್ ಶಂಕರ್ (4) ಅವರನ್ನು ವೇಗಿ ದುಷ್ಮಂತ ಚಾಮೀರ ಪೆವಿಲಿಯನ್‌ಗೆ ಅಟ್ಟಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಮ್ಯಾಥ್ಯೂ ವೇಡ್ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಆದರೆ ಉತ್ತಮವಾಗಿ ಆಡುತ್ತಿದ್ದ ಹಾರ್ದಿಕ್ ಎದುರಾಳಿ ತಂಡದಲ್ಲಿ ಆಡುತ್ತಿರುವ ತಮ್ಮ ಸೋದರ ಕೃಣಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 28 ಎಸೆತಗಳನ್ನು ಎದುರಿಸಿದ ಪಾಂಡ್ಯ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು.

ಬೆನ್ನಲ್ಲೇ ಮ್ಯಾಥ್ಯೂ ವೇಡ್ (30) ಅವರನ್ನು ದೀಪಕ್ ಹೂಡಾ ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾದರು.

ಕೊನೆಯ ಐದು ಓವರ್‌ಗಳಲ್ಲಿ ಗೆಲುವಿಗೆ 68 ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ 34 ಎಸೆತಗಳಲ್ಲಿ 60 ರನ್‌ಗಳ ಜೊತೆಯಾಟ ಕಟ್ಟಿದ ಡೇವಿಡ್ ಮಿಲ್ಲರ್ (30) ಹಾಗೂ ರಾಹುಲ್ ತೆವಾಟಿಯಾ ಪಂದ್ಯಕ್ಕೆ ತಿರುವನ್ನು ನೀಡಿದರು.

24 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದ ತೆವಾಟಿಯಾ ಗುಜರಾತ್‌ಗೆ ರೋಚಕ ಗೆಲುವು ಒದಗಿಸಿಕೊಡಲು ನೆರವಾದರು. ಅವರಿಗೆ ತಕ್ಕ ಸಾಥ್ ನೀಡಿದ ಅಭಿನವ್ ಮನೋಹರ್ ಏಳು ಎಸೆತಗಳಲ್ಲಿ 15 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ 19.4 ಓವರ್‌ಗಳಲ್ಲಿ ಗೆಲುವು ದಾಖಲಿಸಿತು.

ಹೂಡಾ-ಬದೋನಿ ಫಿಪ್ಟಿ, ಶಮಿಗೆ ಮೂರು ವಿಕೆಟ್...
ಈ ಮೊದಲು ದೀಪಕ್ ಹೂಡಾ (55) ಹಾಗೂ ಆಯುಷ್ ಬದೋನಿ (54) ಆಕರ್ಷಕ ಅರ್ಧಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಆರು ವಿಕೆಟ್ ನಷ್ಟಕ್ಕೆ 158 ರನ್‌ಗಳ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ಗುಜರಾತ್ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಇತ್ತಂಡಗಳ ಪಾಲಿಗೂ ಇದು ಚೊಚ್ಚಲ ಐಪಿಎಲ್ ಪಂದ್ಯವಾಗಿದೆ. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಲಖನೌ ನಾಯಕ ಕೆ.ಎಲ್ ರಾಹುಲ್ ಅವರನ್ನು ಮೊಹಮ್ಮದ್ ಶಮಿ ಶೂನ್ಯಕ್ಕೆ ಔಟ್ ಮಾಡಿದರು. ಇಲ್ಲಿಗೆ ಶಮಿ ಪರಾಕ್ರಮ ಮುಗಿಯಲಿಲ್ಲ.

ಪವರ್-ಪ್ಲೇನಲ್ಲೇ ಕ್ವಿಂಟನ್ ಡಿ ಕಾಕ್ (7) ಹಾಗೂ ಮನೀಷ್ ಪಾಂಡೆ (6) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಎವಿನ್ ಲೂಯಿಸ್ (10) ಸಹ ಪೆವಿಲಿಯನ್ ಸೇರುವುದರೊಂದಿಗೆ 29 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಹೂಡಾ ಹಾಗೂ ಆಯುಷ್ ಬದೋನಿ ಐದನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಕೌಂಟರ್ ಅಟ್ಯಾಕ್ ಮಾಡಿದ ದೀಪಕ್ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಅಂತಿಮವಾಗಿ ರಶೀದ್ ಖಾನ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದರು. 41 ಎಸೆತಗಳನ್ನು ಎದುರಿಸಿದ ಹೂಡಾ 55 ರನ್ (6 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಅತ್ತ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬದೋನಿ, ಉಜ್ವಲ ಭವಿಷ್ಯವನ್ನು ಸಾರಿದರು. ಅಲ್ಲದೆ ಆರನೇ ವಿಕೆಟ್‌ಗೆ ಕೃಣಾಲ್ ಪಾಂಡ್ಯ (21*) ಜೊತೆಗೂ 40 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

41 ಎಸೆತಗಳನ್ನು ಎದುರಿಸಿದ ಬದೋನಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.