ADVERTISEMENT

IPL 2022 | ನವನಾಯಕರ ಉದಯಕ್ಕೆ ಐಪಿಎಲ್ ವೇದಿಕೆ: ರವಿಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:47 IST
Last Updated 22 ಮಾರ್ಚ್ 2022, 19:47 IST
ರವಿ ಶಾಸ್ತ್ರಿ– ರಾಯಿಟರ್ಸ್ ಚಿತ್ರ
ರವಿ ಶಾಸ್ತ್ರಿ– ರಾಯಿಟರ್ಸ್ ಚಿತ್ರ   

ಬೆಂಗಳೂರು: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯು ಭವಿಷ್ಯದ ನಾಯಕರ ಉದಯಕ್ಕೆ ವೇದಿಕೆಯಾಗಲಿದೆ ಎಂದು ತಂಡದ ಮಾಜಿ ಮುಖ್ಯ ಕೋಚ್‌ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ವರ್ಚುವಲ್ ಆಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಿಷಭ್ ಪಂತ್‌ (ಡೆಲ್ಲಿ ಕ್ಯಾಪಿಟಲ್ಸ್), ಹಾರ್ದಿಕ್ ಪಾಂಡ್ಯ (ಗುಜರಾತ್ ಟೈಟನ್ಸ್), ಶ್ರೇಯಸ್‌ ಅಯ್ಯರ್‌ (ಕೋಲ್ಕತ್ತ ನೈಟ್‌ ರೈಡರ್ಸ್) ಮತ್ತು ಕೆ.ಎಲ್‌.ರಾಹುಲ್‌ (ಲಖನೌ ಸೂಪರ್ ಜೈಂಟ್ಸ್) ಈ ಬಾರಿ ಐಪಿಎಲ್‌ ತಂಡಗಳ ಸಾರಥ್ಯ ವಹಿಸಿದ್ದಾರೆ. ಭಾರತ ತಂಡದ ಭವಿಷ್ಯದ ನಾಯಕತ್ವವನ್ನು ಇವರಲ್ಲಿ ಕಾಣಬಹುದಾಗಿದೆ‘ ಎಂದು ರವಿಶಾಸ್ತ್ರಿ ನುಡಿದರು.

ADVERTISEMENT

‘ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಅವರೂ ಸದ್ಯ ಉತ್ತಮವಾಗಿಯೇ ನಿಭಾಯಿಸುತ್ತಿದ್ದಾರೆ’ ಎಂದೂ ಅವರು ಹೇಳಿದರು.

‘ಐಪಿಎಲ್‌ ಎಂದರೆ ಅಚ್ಚರಿಗಳ ಗುಚ್ಛ. ಪ್ರತಿ ಆವೃತ್ತಿಗೂ ಹೊಸತನ ಇದ್ದೇ ಇರುತ್ತದೆ. ಅದೇ ಟೂರ್ನಿಯ ಸೌಂದರ್ಯ. ನಾಯಕತ್ವ ವಹಿಸಿದವರಿಗೆ ಲೀಗ್‌ ಯಾವಾಗಲೂ ಅಗ್ನಿಪರೀಕ್ಷೆ. ಫ್ರಾಂಚೈಸ್ ಆಧಾರಿತ ಕ್ರಿಕೆಟ್‌ನಲ್ಲಿ ಅವರ ಪಾತ್ರ ಹೆಚ್ಚು‘ ಎಂದು ಹೇಳಿದರು.

‘ಈ ಆವೃತ್ತಿಯು ಹೆಚ್ಚು ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ. ಎರಡು ಹೊಸ ತಂಡಗಳು ಕಣದಲ್ಲಿವೆ. ಆದ್ದರಿಂದ ಸ್ಪರ್ಧೆಯು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಟೂರ್ನಿಯು ಮತ್ತಷ್ಟು ರೋಚಕ ರಸದೌತಣ ನೀಡಬಹುದು. ಈ ಬಾರಿ ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಲ್ಲಿಯೂ ಹೊಸ ಪ್ರತಿಭೆಗಳಿವೆ’ ಎಂದರು.

ಸುದ್ದಿಗೋಷ್ಠಿಯಲ್ಲಿದ್ದ ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ, ‘ಐಪಿಎಲ್‌ಗೆ ಈ ಬಾರಿ ವೀಕ್ಷಕ ವಿವರಣೆಕಾರನಾಗಿಕಾರ್ಯನಿರ್ವಹಿಸಲು ಕಾತರನಾಗಿದ್ದೇನೆ. ಈ ಹೊಸ ಸವಾಲು ಎದುರಿಸಲು ಸಿದ್ಧನಾಗಿರುವೆ. ಮೊದಲ ಅನುಭವ ಇದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.