ADVERTISEMENT

ವಿರಾಟ್ ಕೊಹ್ಲಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ಜೋಸ್ ಬಟ್ಲರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2022, 10:36 IST
Last Updated 23 ಏಪ್ರಿಲ್ 2022, 10:36 IST
ಜೋಸ್ ಬಟ್ಲರ್
ಜೋಸ್ ಬಟ್ಲರ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಮೂಲದ ಜೋಸ್ ಬಟ್ಲರ್, ಒಟ್ಟು ನಾಲ್ಕು ಶತಕಗಳ ಸಾಧನೆ ಮಾಡಿದ್ದಾರೆ.

ಈ ಪೈಕಿ ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ ಬಟ್ಲರ್, ಮೂರನೇ ಶತಕ ಗಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬಟ್ಲರ್, ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯುವಹೊಸ್ತಿಲಲ್ಲಿದ್ದಾರೆ.

ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಬಟ್ಲರ್ 81.83ರ ಸರಾಸರಿಯಲ್ಲಿ 491 ರನ್ ಗಳಿಸಿದ್ದಾರೆ. ಐಪಿಎಲ್ 2016ರಲ್ಲಿ ಕೊಹ್ಲಿ, ದಾಖಲೆಯ 973 ರನ್ ಗಳಿಸಿದ್ದರು.

ಅಂದು ಒಂದೇ ಆವೃತ್ತಿಯಲ್ಲಿ ಕೊಹ್ಲಿ ನಾಲ್ಕು ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದರು. ಪ್ರಸ್ತುತ ಐಪಿಎಲ್ 15ನೇ ಆವೃತ್ತಿಯಲ್ಲಿ ಬಟ್ಲರ್, ಮೂರು ಶತಕಗಳನ್ನು ಗಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ (100), ಕೋಲ್ಕತ್ತ ನೈಟ್ ರೈಡರ್ಸ್ (103) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (116) ವಿರುದ್ಧ ಬಟ್ಲರ್ ಶತಕ ಸಾಧನೆ ಮಾಡಿದ್ದಾರೆ.

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ನಾಲ್ಕನೇ ಶತಕ ಗಳಿಸಿರುವ ಬಟ್ಲರ್, ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಲ್ಲೂಕೊಹ್ಲಿ ದಾಖಲೆ ಸರಿಗಟ್ಟಲು ಕೇವಲ ಒಂದು ಶತಕದ ಅಗತ್ಯವಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸರದಾರರು:

ಕ್ರಿಸ್ ಗೇಲ್ - 6
ವಿರಾಟ್ ಕೊಹ್ಲಿ - 5
ಡೇವಿಡ್ ವಾರ್ನರ್ - 4
ಶೇನ್ ವಾಟ್ಸನ್ - 4
ಜೋಸ್ ಬಟ್ಲರ್ - 4
ಕೆ.ಎಲ್ ರಾಹುಲ್ - 3
ಸಂಜು ಸ್ಯಾಮ್ಸನ್ - 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.