ಮುಂಬೈ: ಲಲಿತ್ ಯಾದವ್ (48*) ಹಾಗೂ ಅಕ್ಷರ್ ಪಟೇಲ್ (38*) ಆಕ್ರಮಣಕಾರಿ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಲ್ಲಿನ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಅರ್ಹ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಇಶಾನ್ ಕಿಶಾನ್ ಸ್ಫೋಟಕ ಅರ್ಧಶತಕದ (81*) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 177 ರನ್‌ಗಳ ಸವಾಲಿನಮೊತ್ತ ಪೇರಿಸಿತ್ತು.
ಲಲಿತ್, ಅಕ್ಷರ್ ಜೊತೆಯಾಟ...
ಬಳಿಕ ಗುರಿ ಬೆನ್ನತ್ತಿದ್ದ ಡೆಲ್ಲಿ ಒಂದು ಹಂತದಲ್ಲಿ 13.2 ಓವರ್‌ಗಳಲ್ಲಿ 104 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮುರಿಯದ ಏಳನೇ ವಿಕೆಟ್‌ಗೆ 30 ಎಸೆತಗಳಲ್ಲಿ75 ರನ್‌ಗಳ ಜೊತೆಯಾಟ ಕಟ್ಟಿದ ಲಲಿತ್ ಯಾದವ್ ಹಾಗೂ ಅಕ್ಷರ್ ಪಟೇಲ್ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
ಪೃಥ್ವಿ ಶಾ 38, ಟಿಮ್ ಸೀಫರ್ಟ್ 21 ಹಾಗೂ ಶಾರ್ದೂಲ್ ಠಾಕೂರ್ 22 ರನ್ ಗಳಿಸಿದರು. ನಾಯಕ ರಿಷಭ್ ಪಂತ್ (1) ನಿರಾಸೆ ಮೂಡಿಸಿದರು.
38 ಎಸೆತಗಳನ್ನು ಎದುರಿಸಿದ ಲಲಿತ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಅಕ್ಷರ್ 17 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 38 ರನ್ ಗಳಿಸಿ ಔಟಾಗದೆ ಉಳಿದರು.
ಮುಂಬೈ ಪರ ಮುರುಗನ್ ಅಶ್ವಿನ್ ಎರಡು ಹಾಗೂ ಬಾಸಿಲ್ ಥಂಪಿ ಮೂರು ವಿಕೆಟ್ ಗಳಿಸಿದರು.
ಇಶಾನ್ ಅಬ್ಬರ...
ಈ ಮೊದಲು ಎಡಗೈ ಬ್ಯಾಟರ್ ಇಶಾನ್ ಕಿಶನ್ (81*) ಹಾಗೂ ನಾಯಕ ರೋಹಿತ್ ಶರ್ಮಾ (41) ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಮುಂಬೈ ಐದು ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತ್ತು.
ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 67 ರನ್‌ಗಳ ಜೊತೆಯಾಟ ಕಟ್ಟಿದರು.
32 ಎಸೆತಗಳನ್ನು ಎದುರಿಸಿದ ರೋಹಿತ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು.
ಕುಲ್‌ದೀಪ್ ಮೋಡಿ...
ಈ ಹಂತದಲ್ಲಿ ದಾಳಿಗಿಳಿದ ಕುಲ್‌ದೀಪ್ ಯಾದವ್, ಮುಂಬೈ ಓಟಕ್ಕೆ ಕಡಿವಾಣ ಹಾಕಿದರು. ರೋಹಿತ್ ಜೊತೆಗೆ ಅನ್ಮೋಲ್‌ಪ್ರೀತ್ ಸಿಂಗ್ (8) ಅವರನ್ನು ಹೊರದಬ್ಬಿದರು.
ಈ ನಡುವೆ ತಿಲಕ್ ವರ್ಮಾ ಪ್ರಭಾವಿ ಇನ್ನಿಂಗ್ಸ್ ಕಟ್ಟಿದರು. 15 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿದರು.
ಬಳಿಕ ಕೀರನ್ ಪೊಲಾರ್ಡ್ (3) ಕೂಡ ಕುಲ್‌ದೀಪ್ ಬಲೆಗೆ ಬಿದ್ದರು. 18 ರನ್ ಮಾತ್ರ ಬಿಟ್ಟುಕೊಟ್ಟ ಕುಲ್‌ದೀಪ್ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಇಶಾನ್ 34 ಎಸೆತಗಳಲ್ಲಿ ಫಿಫ್ಟಿ ಸಾಧನೆ...
ಇನ್ನೊಂದೆಡೆ ಇಶಾನ್ ಕಿಶನ್ 34 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದರು.
ಈ ಮೂಲಕ ಮುಂಬೈ ಉತ್ತಮ ಮೊತ್ತ ಪೇರಿಸಲು ನೆರವಾದರು. 48 ಎಸೆತಗಳನ್ನು ಎದುರಿಸಿದ ಇಶಾನ್ 11 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಔಟಾಗದೆ ಉಳಿದರು.
ಡೆಲ್ಲಿ ಪರ ಕುಲ್‌ದೀಪ್ ಮೂರು ಹಾಗೂ ಖಲೀಲ್ ಅಹಮದ್ ಎರಡು ವಿಕೆಟ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.