ADVERTISEMENT

IPL-2022 | 'ಆತ ಭಾರತದ ಭವಿಷ್ಯ': ಗವಾಸ್ಕರ್ ಹೀಗೆ ಹೇಳಿದ್ದು ಯಾರ ಬಗ್ಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2022, 12:34 IST
Last Updated 4 ಏಪ್ರಿಲ್ 2022, 12:34 IST
ಸುನಿಲ್ ಗವಾಸ್ಕರ್‌
ಸುನಿಲ್ ಗವಾಸ್ಕರ್‌   

ಕನ್ನಡಿಗ ಕೆ.ಎಲ್‌.ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್‌ ತಂಡವು ಮೊದಲ ಪಂದ್ಯದಲ್ಲಿ ಸೋಲು ಕಾಣುವುದರೊಂದಿಗೆ ಐಪಿಎಲ್‌–2022 ಅಭಿಯಾನ ಆರಂಭಿಸಿತು. ಆದರೆ, ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೋಲುಣಿಸಿ ಜಯದ ಹಾದಿಗೆ ಮರಳಿದೆ.

ಲಖನೌ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ, ಆರಂಭಿಕ ರಾಬಿನ್ ಉತ್ತಪ್ಪ (50) ಗಳಿಸಿದ ಅರ್ಧಶತಕ ಮತ್ತು ಆಲ್‌ರೌಂಡರ್ ಶಿವಂ ದುಬೆ (49) ಅವರ ಅಮೋಘ ಬ್ಯಾಟಿಂಗ್ ಬಲದಿಂದನಿಗದಿತ 20 ಓವರ್‌ಗಳಲ್ಲಿ 210 ರನ್ ಕಲೆಹಾಕಿತ್ತು. ಈ ಗುರಿಯನ್ನು ಲಖನೌ ಪಡೆ ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಮುಟ್ಟಿತ್ತು. ಆರಂಭಿಕಕ್ವಿಂಟನ್‌ ಡಿಕಾಕ್ ಮತ್ತು ಎವಿನ್ ಲೂಯಿಸ್ ಅರ್ಧಶತಕ ಗಳಿಸಿ ಲಖನೌಗೆ ನೆರವಾಗಿದ್ದರು.

ಲಖನೌ ತಂಡದ ಪ್ರಮುಖ ವೇಗಿ ಎನಿಸಿರುವ ಆವೇಶ್ ಖಾನ್,ಗುಜರಾತ್ ಮತ್ತು ಚೆನ್ನೈ ವಿರುದ್ಧದ ಪಂದ್ಯಗಳಲ್ಲಿ 9 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಗುಜರಾತ್ ಎದುರು 3.4 ಓವರ್‌ನಲ್ಲಿ ಒಂದು ವಿಕೆಟ್ ಪಡೆದು 33 ರನ್ ನೀಡಿದ್ದ ಆವೇಶ್, ಚೆನ್ನೈ ವಿರುದ್ಧ 4 ಓವರ್‌ಗಳಲ್ಲಿ 2 ವಿಕೆಟ್ ಪಡೆದು 38 ರನ್ ನೀಡಿದ್ದರು.

ADVERTISEMENT

ಆದಾಗ್ಯೂ ಅವರು (ಆವೇಶ್ ಖಾನ್) ಮುಂದಿನ ದಿನಗಳಲ್ಲಿಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ ಎಂದು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್‌ ಹೇಳಿದ್ದಾರೆ.

ಭಾರತ ತಂಡದ ಮಾಜಿ ನಾಯಕರೂ ಆಗಿರುವ ಗವಾಸ್ಕರ್‌,'ನೀವು ನಿಮ್ಮ ಹಿಂದಿನ ಮುಖಾಮುಖಿಯಲ್ಲಿ (ಪಂದ್ಯದಲ್ಲಿ) ವಿಕೆಟ್ ಪಡೆದಿದ್ದರೆ, ಅದು ನಿಮಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ. ಅದೇರೀತಿ, ಹೆಚ್ಚು ರನ್ ಬಿಟ್ಟುಕೊಟ್ಟಿದ್ದರೆ, ನಿಮ್ಮಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಅದು ಒಂದು ಸವಾಲೂ ಆಗಿರುತ್ತದೆ. 'ಕಳೆದ ಪಂದ್ಯದಲ್ಲಿ ರನ್‌ ಬಿಟ್ಟುಕೊಟ್ಟಿದ್ದೇನೆ. ಇದೀಗ ನನ್ನ ಸಾಮರ್ಥ್ಯವನ್ನು ತೋರಿಸಬೇಕು' ಎನ್ನುವ ಛಲ ಮೂಡಿಸುತ್ತದೆ. ಇದೀಗ ಆವೇಶ್ ಖಾನ್ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಜನರು ಆತನ ಕುರಿತು ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಆತ ಭವಿಷ್ಯದಲ್ಲಿಭಾರತ ಕ್ರಿಕೆಟ್‌ನ ಪ್ರಮುಖ ಆಟಗಾರನಾಗಲಿದ್ದಾನೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌–2021ರಲ್ಲಿ 24 ವಿಕೆಟ್‌ಗಳನ್ನು ಉರುಳಿಸಿದ್ದ ಆವೇಶ್, ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಮುಂಬೈನ್‌ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಇಂದು(ಏ.04) ನಡೆಯುವ ಪಂದ್ಯದಲ್ಲಿಲಖನೌ ಸೂಪರ್‌ಜೈಂಟ್ಸ್‌ ತಂಡವು ಸನ್‌ರೈಸರ್ಸ್ ಹೈದರಾಬಾದ್ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.