ADVERTISEMENT

IPL 2022: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಧೋನಿ, ಸಿಂಹಾಸನಕ್ಕೆ ಜಡೇಜ

ಪಿಟಿಐ
Published 24 ಮಾರ್ಚ್ 2022, 17:16 IST
Last Updated 24 ಮಾರ್ಚ್ 2022, 17:16 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ಮುಂಬೈ: ಮಹೇಂದ್ರಸಿಂಗ್ ಧೋನಿ ಮತ್ತೊಂದು ಬಾರಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಗುರುವಾರ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಗೆ ಹಸ್ತಾಂತರಿಸಿದ್ದಾರೆ. 2008ರಲ್ಲಿ ಮೊದಲ ಆವೃತ್ತಿಯ ಟೂರ್ನಿ ಆರಂಭವಾದಾಗಿನಿಂದಲೂ ಧೋನಿ ಚೆನ್ನೈ ತಂಡಕ್ಕೆ ನಾಯಕರಾಗಿದ್ದರು. ಮಹಿನಾಯಕತ್ವದಲ್ಲಿ ತಂಡವು ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಹೋದ ವರ್ಷವೂ ಟ್ರೋಫಿ ಗೆದ್ದಿತ್ತು. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಎರಡನೇ ತಂಡವಾಗಿದೆ.

‘ತಂಡದ ನಾಯಕತ್ವವನ್ನು ರವೀಂದ್ರ ಜಡೇಜಗೆ ಹಸ್ತಾಂತರಿಸಲು ಧೋನಿ ನಿರ್ಧರಿಸಿದ್ದಾರೆ. 2012ರಿಂದ ಜಡೇಜ ಚೆನ್ನೈ ತಂಡದಲ್ಲಿದ್ದಾರೆ. ಧೋನಿ ಈ ವರ್ಷ ಮತ್ತು ಮುಂದೆಯೂ ನಮ್ಮ ತಂಡವನ್ನು ಪ್ರತಿನಿಧಿಸುವರು’ ಎಂದು ಚೆನ್ನೈ ಫ್ರ್ಯಾಂಚೈಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಧೋನಿ ತಮ್ಮ ವೃತ್ತಿಜೀವನದಲ್ಲಿ ನಾಯಕತ್ವ ಬಿಟ್ಟುಕೊಡುವ ಅಥವಾ ವಿದಾಯ ಹೇಳುವುದನ್ನು ದಿಢೀರ್ ಎಂದು ಪ್ರಕಟಿಸಿದ್ದೇ ಹೆಚ್ಚು.2014ರಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿಯಲ್ಲಿ ಆಡುವ ಸಂದರ್ಭದಲ್ಲಿಯೇ ಭಾರತ ಟೆಸ್ಟ್ ತಂಡಕ್ಕೆ ವಿದಾಯ ಹೇಳಿದ್ದರು.

2017ರಲ್ಲಿ ಸೀಮಿತ ಓವರ್‌ಗಳ ತಂಡಗಳ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ್ದರು. 2020ರ ಆಗಸ್ಟ್ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ನಂತರದ ಐಪಿಎಲ್‌ನಲ್ಲಿ ಮಾತ್ರ ತಮ್ಮ ಆಟ ಮುಂದುವರಿಸಿದ್ದರು.

ಚೆನ್ನೈ ತಂಡದಲ್ಲಿ ಅವರಿಗೆ ‘ಆಪ್ತ’ ರಾಗಿರುವ ಜಡೇಜ ಅವರನ್ನೇ ತಮ್ಮ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಅಚ್ಚರಿಯೇನಲ್ಲ. 2014, 2018 ಮತ್ತು ಹೋದ ವರ್ಷ ತಂಡವು ಚಾಂಪಿಯನ್ ಆಗುವಲ್ಲಿ ಜಡೇಜ ಕಾಣಿಕೆಯೂ ಮಹತ್ವದ್ದಾಗಿದೆ. ಈಚೆಗೆ ಮೆಗಾ ಹರಾಜಿಗಿಂತ ಮುಂಚೆ ಚೆನ್ನೈ ತಂಡವು ನಾಲ್ಕು ಆಟಗಾರರನ್ನು ಉಳಿಸಿಕೊಂಡಿತ್ತು. ಅದರಲ್ಲಿಯೂ ಧೋನಿಯ ನಂತರದ ಹೆಸರು ಜಡೇಜ ಅವರದ್ದಾಗಿತ್ತು. ಇಂಗ್ಲೆಂಡ್ ತಂಡದ ಮೋಯಿನ್ ಅಲಿ ಮತ್ತು ಯುವ ಬ್ಯಾಟರ್ ಋತುರಾಜ್ ಗಾಯಕವಾಡ್ ಉಳಿದ ಇನ್ನಿಬ್ಬರು.

ಬುಧವಾರ ಪ್ರಕಟವಾದ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಜಡೇಜ ಅಗ್ರಸ್ಥಾನ ಪಡೆದಿದ್ದರು.

‘ಧೋನಿ ಯಾವಾಗಲೂ ತಂಡದ ಹಿತಕ್ಕಾಗಿಯೇ ನಿರ್ಧಾರ ಕೈಗೊಳ್ಳುತ್ತಾರೆ. ಆದ್ದರಿಂದ ಯಾವ ಚಿಂತೆಯೂ ಇಲ್ಲ’ ಎಂದು ತಂಡದ ಸಿಇಒ ಕಾಶಿ ವಿಶ್ವನಾಥ್ ಹೇಳಿದ್ದಾರೆ.

‘ಈ ಆವೃತ್ತಿಯು ಅವರ ಕೊನೆಯದು ಎಂದು ಹೇಳಲಾಗದು. ಏಕೆಂದರೆ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಹಳಷ್ಟು ಸಮರ್ಥರಾಗಿದ್ದಾರೆ. ಅವರು ಫಿಟ್ ಆಗಿರುವವರೆಗೂ ನಮ್ಮ ತಂಡದಲ್ಲಿಯೇ ಆಡಲಿ ಎನ್ನುವ ಆಶಯವಿದೆ’ ಎಂದೂ ವಿಶ್ವನಾಥ್ ಹೇಳಿದರು.

‘ಪ್ರಸ್ತುತ ಜಡೇಜ ಅವರು ತಮ್ಮ ವೃತ್ತಿಜೀವನದ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಧೋನಿ ಮಾರ್ಗದರ್ಶನದಲ್ಲಿ ಅವರು ಉತ್ತಮವಾಗಿ ನಾಯಕತ್ವ ನಿಭಾಯಿಸುವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 15ನೇ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.