ADVERTISEMENT

IPL 2022 MI vs RR: ಬಟ್ಲರ್ ಶತಕ; ರಾಜಸ್ಥಾನ್ ಜಯಭೇರಿ, ಮುಂಬೈಗೆ ಸತತ 2ನೇ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಏಪ್ರಿಲ್ 2022, 14:09 IST
Last Updated 2 ಏಪ್ರಿಲ್ 2022, 14:09 IST
ಜೋಸ್ ಬಟ್ಲರ್
ಜೋಸ್ ಬಟ್ಲರ್   

ಮುಂಬೈ: ಜೋಸ್ ಬಟ್ಲರ್ (100) ಅಮೋಘ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ದ ನಡೆದ ಐಪಿಎಲ್ ಪಂದ್ಯದಲ್ಲಿ23 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿರುವ ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನೊಂದೆಡೆ ಮುಂಬೈ ಸತತ ಎರಡನೇ ಸೋಲಿಗೆ ಒಳಗಾಗಿದೆ.

ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ ರಾಜಸ್ಥಾನ್, ಎಂಟು ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಮುಂಬೈ, ಇಶಾನ್ ಕಿಶಾನ್ (54) ಹಾಗೂ ತಿಲಕ್ ವರ್ಮಾ (61) ಅರ್ಧಶತಕಗಳ ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ADVERTISEMENT

ನಾಯಕ ರೋಹಿತ್ ಶರ್ಮಾ (10) ವೈಫಲ್ಯ ಅನುಭವಿಸಿದರು. ಈ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಲಭ್ಯವಿರಲಿಲ್ಲ.

ರಾಜಸ್ಥಾನ್ ಪರ ಯಜುವೇಂದ್ರ ಚಾಹಲ್ ಹಾಗೂ ನವದೀಪ್ ಸೈನಿ ತಲಾ ಎರಡು ಮತ್ತು ಆರ್. ಅಶ್ವಿನ್, ಟ್ರೆಂಟ್ ಬೌಲ್ಟ್ ಹಾಗೂ ಪ್ರಸಿದ್ಧ ಕೃಷ್ಣ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.

ಬಟ್ಲರ್ ಶತಕ...
ಈ ಮೊದಲು ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಬಟ್ಲರ್, 66 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಇದು ಐಪಿಎಲ್‌ನಲ್ಲಿ ಬಟ್ಲರ್ ಬ್ಯಾಟ್‌ನಿಂದ ಸಿಡಿದ ಎರಡನೇ ಶತಕವಾಗಿದೆ. ಹಾಗೆಯೇ ಐಪಿಎಲ್ 2022ರಲ್ಲಿ ಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿದರು.

ಬಟ್ಲರ್‌ಗೆ ನಾಯಕ ಸಂಜು ಸ್ಯಾಮ್ಸನ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಸಂಜು 21 ಎಸೆತಗಳಲ್ಲಿ 30 ಹಾಗೂ ಹೆಟ್ಮೆಯರ್ 14 ಎಸೆತಗಳಲ್ಲಿ 35 ರನ್ ಗಳಿಸಿದರು.

68 ಎಸೆತಗಳನ್ನು ಎದುರಿಸಿದ ಬಟ್ಲರ್ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ಸೇರಿದ್ದವು.

ಮುಂಬೈ ಪರ 17 ರನ್ ತೆತ್ತು ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಪರಿಣಾಮಕಾರಿ ಎನಿಸಿದರು. ಟೈಮಲ್ ಮಿಲ್ಸ್ ಸಹ ಮೂರು ವಿಕೆಟ್ ಪಡೆದರು.

ಈ ಮೊದಲು ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು.

ತಂಡಗಳು:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಡ್ಯಾನಿಲ್ ಸ್ಯಾಮ್ಸ್, ಮುರುಗನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಟೈಮಲ್ ಮಿಲ್ಸ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಾಲ್, ಸಂಜಯ್ ಯಾದವ್.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ–ವಿಕೆಟ್‌ಕೀಪರ್), ದೇವದತ್ತ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಶಿಮ್ರೊನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್. ಅಶ್ವಿನ್, ನೇಥನ್ ಕೌಲ್ಟರ್‌ನೈಲ್, ಯಜುವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ, ನವದೀಪ್ ಸೈನಿ, ಕೆ.ಸಿ. ಕಾರ್ಯಪ್ಪ, ಕರುಣ್ ನಾಯರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.