ADVERTISEMENT

IPL 2022 | GT vs RR: ಟಾಸ್‌ ಗೆದ್ದ ಗುಜರಾತ್‌ ಟೈಟನ್ಸ್‌ ಫೀಲ್ಡಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮೇ 2022, 14:03 IST
Last Updated 24 ಮೇ 2022, 14:03 IST
 ಗುಜರಾತ್ ಟೈಟನ್ಸ್‌ vs ರಾಜಸ್ಥಾನ ರಾಯಲ್ಸ್ - ಚಿತ್ರ ಕೃಪೆ:  IPL ಟ್ವಿಟರ್‌ ಖಾತೆ
ಗುಜರಾತ್ ಟೈಟನ್ಸ್‌ vs ರಾಜಸ್ಥಾನ ರಾಯಲ್ಸ್ - ಚಿತ್ರ ಕೃಪೆ: IPL ಟ್ವಿಟರ್‌ ಖಾತೆ   

ಕೋಲ್ಕತ್ತ: ಈಡನ್‌ ಗಾರ್ಡನ್‌ನಲ್ಲಿ ಇಂದು ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ತಂಡವು ರಾಜಸ್ಥಾನ ರಾಯಲ್ಸ್ ಎದುರು ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ.

ಗುಜರಾತ್ ಟೈಟನ್ಸ್‌ ತಂಡದಲ್ಲಿ ಲಾಕಿ ಫರ್ಗ್ಯುಸನ್ ಬದಲು ಅಲ್ಜರಿ ಜೋಸೆಫ್‌ಗೆ 11ರ ಬಳಗದಲ್ಲಿ ಸ್ಥಾನ ನೀಡಲಾಗಿದೆ. ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್‌ ತಂಡ ಇದೇ ಮೊದಲ ಬಾರಿ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುತ್ತಿದೆ. ಇದೀಗ ಲೀಗ್ ಹಂತದಲ್ಲಿ ಅಗ್ರಸ್ಥಾನ ಗಳಿಸಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಜಯಿಸಿದವರು ನೇರವಾಗಿ ಫೈನಲ್ ಪ್ರವೇಶಿಸುವರು. ಸೋತವರು ಎರಡನೇ ಕ್ವಾಲಿಫೈಯರ್ ಆಡಲಿದ್ದಾರೆ.

ADVERTISEMENT

ಲೀಗ್ ಹಂತದಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದವು. ಗುಜರಾತ್ ಜಯಿಸಿತ್ತು.

ಅಂಕಪಟ್ಟಿಯಲ್ಲಿ ಗುಜರಾತ್ ಮೊದಲ ಮತ್ತು ರಾಯಲ್ಸ್‌ ಎರಡನೇ ಸ್ಥಾನ ಪಡೆದಿವೆ. ಆದರೆ, ಆಟಗಾರರ ಸಾಮರ್ಥ್ಯವನ್ನು ನೋಡಿದರೆ ಸಮಬಲಶಾಲಿಗಳಂತೆ ಕಾಣುತ್ತಿವೆ. ಉಭಯ ತಂಡಗಳ ನಾಯಕರಾದ ಹಾರ್ದಿಕ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಗುಜರಾತ್ ಅರಂಭಿಕ ಶುಭಮನ್ ಗಿಲ್ ಮತ್ತು ರಾಜಸ್ಥಾನದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೂಡ ಲಯದಲ್ಲಿದ್ದಾರೆ. ಬಟ್ಲರ್ ಈ ಟೂರ್ನಿಯಲ್ಲಿ ಮೂರು ಶತಕ ದಾಖಲಿಸಿದ್ದಾರೆ.

ಗುಜರಾತ್ ತಂಡದ ಸ್ಪಿನ್ನರ್ ರಶೀದ್ ಖಾನ್ ಮತ್ತು ರಾಯಲ್ಸ್‌ನ ಯಜುವೇಂದ್ರ ಚಾಹಲ್ ಅವರ ನಡುವಿನ ಹಣಾಹಣಿಗೆ ಈ ಪಂದ್ಯ ವೇದಿಕೆಯಾಗಲಿದೆ. ಇಬ್ಬರು ಪಂದ್ಯ ಜಯಿಸಿ ಕೊಡುವ ಸಮರ್ಥ ಸ್ಪಿನ್ನರ್‌ಗಳಾಗಿದ್ದಾರೆ. ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ ಕೃಷ್ಣ ಕೂಡ ಪೈಪೋಟಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ರಾಜಸ್ಥಾನ ತಂಡದಲ್ಲಿ ರಿಯಾನ್ ಪರಾಗ್ ಮತ್ತು ಟೈಟನ್ಸ್‌ನ ರಾಹುಲ್ ತೆವಾಟಿಯಾ ಮಧ್ಯೆ ಸಿಕ್ಸರ್‌ ಸಿಡಿಸುವ ಪೈಪೋಟಿ ನಡೆಯುವ ನಿರೀಕ್ಷೆಯೂ ಇದೆ.

ತಂಡಗಳು–

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ (ನಾಯಕ), ಶುಭಮನ್ ಗಿಲ್, ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಅಲ್ಜರಿ ಜೋಸೆಫ್, ಸಾಯಿ ಕಿಶೋರ್‌, ಯಶ್ ದಯಾಳ್, ಮೊಹಮ್ಮದ್ ಶಮಿ.

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರೊನ್ ಹೆಟ್ಮೆಯರ್, ದೇವದತ್ತ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ಯಜುವೇಂದ್ರ ಚಾಹಲ್, ರಿಯಾನ್ ಪರಾಗ್, ಒಬೆದ್‌ ಮೆಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.