ADVERTISEMENT

IPL 2022 | ರಾಜಸ್ಥಾನ ವಿರುದ್ಧ 7 ವಿಕೆಟ್‌ ಜಯ; ಫೈನಲ್‌ ಪ್ರವೇಶಿಸಿದ ಗುಜರಾತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮೇ 2022, 19:58 IST
Last Updated 24 ಮೇ 2022, 19:58 IST
   

ಕೋಲ್ಕತ್ತ: ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಗುಜರಾತ್ ಟೈಟನ್ಸ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿತು.

ಮಂಗಳವಾರ ಈಡನ್‌ ಗಾರ್ಡನ್‌ನಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ತಂಡವು 7 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಡೇವಿಡ್ ಮಿಲ್ಲರ್ (ಅಜೇಯ 68; 38ಎಸೆತ, 4X3, 6X5) ಅವರ ಅಬ್ಬರದ ಆಟಕ್ಕೆ ಜಯ ಒಲಿಯಿತು.

ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಯಲ್ಸ್ ತಂಡವು ಜೋಸ್‌ ಬಟ್ಲರ್ (89; 56ಎಸೆತ, 4X12, 6X2) ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 188 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡವು 19.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 191 ರನ್‌ ಗಳಿಸಿತು.

ADVERTISEMENT

ಪಂದ್ಯದ ಕೊನೆಯ ಓವರ್‌ನಲ್ಲಿ ಗುಜರಾತ್ ತಂಡಕ್ಕೆ 16 ರನ್‌ಗಳ ಅಗತ್ಯವಿತ್ತು. ಪ್ರಸಿದ್ಧ ಕೃಷ್ಣ ಹಾಕಿದ ಈ ಓವರ್‌ನಲ್ಲಿ ಮೊದಲ ಮೂರು ಎಸೆತಗಳಲ್ಲಿ ಡೆವಿಡ್‌ ಮಿಲ್ಲರ್ ‘ಸಿಕ್ಸರ್‌ ಹ್ಯಾಟ್ರಿಕ್‌’ ಸಿಡಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

85 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ಗುಜರಾತ್ ತಂಡಕ್ಕೆ ಮಿಲ್ಲರ್‌ ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 40) ಜಯದ ಕಾಣಿಕೆ ನೀಡಿದರು. ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 106 ರನ್ ಸೇರಿಸಿದರು.

ಬಟ್ಲರ್ ಅಬ್ಬರ: ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ ಅಬ್ಬರಿಸಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.

ಗುಜರಾತ್ ತಂಡದ ಬೌಲರ್‌ಗಳ ಉತ್ತಮ ದಾಳಿಯಿಂದಾಗಿ ರಾಜಸ್ಥಾನ 15 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 124 ರನ್ ಗಳಿಸಿತ್ತು.

ಬಟ್ಲರ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 68 ರನ್‌ ಸೇರಿಸಿದ್ದ ನಾಯಕ ಸಂಜು ಸ್ಯಾಮ್ಸನ್ (47; 26ಎ) ಹತ್ತನೇ ಓವರ್‌ನಲ್ಲಿ ಔಟಾದರು. ಇದರಿಂದಾಗಿ ವಿಕೆಟ್ ಉಳಿಸಿಕೊಳ್ಳುವತ್ತ ಹೆಚ್ಚು ಗಮನ ನೀಡಿದ ಬಟ್ಲರ್ ಮತ್ತು ದೇವದತ್ತ ಪಡಿಕ್ಕಲ್ (28; 20ಎ) ಹೆಚ್ಚು ವೇಗವಾಗಿ ಆಡಲಿಲ್ಲ. ಆದರೆ, 15ನೇ ಓವರ್‌ನಲ್ಲಿ ಪಡಿಕ್ಕಲ್ ಔಟಾದ ನಂತರ ಬಟ್ಲರ್ ಆರ್ಭಟ ಮುಗಿಲುಮುಟ್ಟಿತು.

ಆ ಹಂತದಲ್ಲಿ ಬಟ್ಲರ್ 35 ಎಸೆತಗಳಲ್ಲಿ 37 ರನ್‌ಗಳನ್ನು ಗಳಿಸಿದ್ದರು. ಇದರ ನಂತರ ಎದುರಿಸಿದ 20 ಎಸೆತಗಳಲ್ಲಿ 52 ರನ್‌ಗಳನ್ನು ಸೂರೆ ಮಾಡಿದರು. ತಂಡದ ಮೊತ್ತಕ್ಕೆ 64 ರನ್‌ಗಳು ಹರಿದುಬಂದವು.

ರಾಯಲ್ಸ್ ತಂಡವು ಫೈನಲ್‌ಗೆ ಅರ್ಹತೆ ಪಡೆಯಲು ಎರಡನೇ ಕ್ವಾಲಿಫೈಯರ್‌ ಆಡಬೇಕಿದೆ.ಅದರಲ್ಲಿ ಗೆದ್ದರೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ಅವಕಾಶ ಗಿಟ್ಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.