ADVERTISEMENT

IPL 2022: ಅಶ್ವಿನ್ ಮಿಂಚು; ಚೆನ್ನೈ ಮಣಿಸಿದ ರಾಜಸ್ಥಾನ್ ಪ್ಲೇ-ಆಫ್‌ಗೆ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2022, 17:55 IST
Last Updated 20 ಮೇ 2022, 17:55 IST
ಆರ್. ಅಶ್ವಿನ್
ಆರ್. ಅಶ್ವಿನ್   

ಮುಂಬೈ: ರವಿಚಂದ್ರನ್ ಅಶ್ವಿನ್ ಆಲ್‌ರೌಂಡ್ ಆಟ (ಅಜೇಯ 40 ರನ್ ಹಾಗೂ 1 ವಿಕೆಟ್) ಹಾಗೂ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕದ (59) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಇದರೊಂದಿಗೆ ಪ್ಲೇ-ಆಫ್ ಹಂತಕ್ಕೆ ಲಗ್ಗೆಯಿಟ್ಟಿದೆ. ಅಲ್ಲದೆ ಆಡಿರುವ 14 ಪಂದ್ಯಗಳಲ್ಲಿ ಒಂಬತ್ತನೇ ಗೆಲುವಿನೊಂದಿಗೆ ಒಟ್ಟು 18 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಈ ಮೂಲಕ ಮೊದಲ ಕ್ವಾಲಿಫೈಯರ್‌ನಲ್ಲಿ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದೆ. ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ್ ತಂಡದಷ್ಟೇ ಅಂಕಗಳನ್ನು ಹೊಂದಿದ್ದರೂ ರನ್ ರೇಟ್ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದಿದೆ.

ADVERTISEMENT

ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಯಾವ ತಂಡವು ಪ್ಲೇ-ಆಫ್‌ಗೆ ಪ್ರವೇಶಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕೊನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದ್ದರಷ್ಟೇ ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆಯಿಡಲಿದೆ.

ಇನ್ನೊಂದೆಡೆ ಚೆನ್ನೈ 14 ಪಂದ್ಯಗಳಲ್ಲಿ 10ನೇ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ.

ಮುಂಬೈನ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಮೊಯಿನ್ ಅಲಿ ಬಿರುಸಿನ ಅರ್ಧಶತಕದ (93) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ರಾಜಸ್ಥಾನ್, ಅಶ್ವಿನ್ ಹಾಗೂ ಜೈಸ್ವಾಲ್ ಅಮೋಘ ಆಟದ ನೆರವಿನಿಂದ ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.4 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ರಾಜಸ್ಥಾನ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮುನ್ನಡೆಯಲ್ಲಿರುವ ಜೋಸ್ ಬಟ್ಲರ್ ಕೇವಲ ಎರಡು ರನ್ ಗಳಿಸಿ ಔಟ್ ಆದರು.

ಇನ್ನೊಂದೆಡೆ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆಟವಾಡಿದರು. ಅವರಿಗೆ ನಾಯಕ ಸಂಜು ಸ್ಯಾಮ್ಸನ್ ಸಾಥ್ ನೀಡಿದರು. ಅಲ್ಲದೆ ದ್ವಿತೀಯ ವಿಕೆಟ್‌ಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಆದರೆ ನಾಯಕ ಸಂಜು (15) ಬೆನ್ನಲ್ಲೇ ದೇವದತ್ತ ಪಡಿಕ್ಕಲ್ (3) ಔಟ್ ಆಗಿರುವುದು ರಾಜಸ್ಥಾನ್ ರನ್ ಗತಿಯನ್ನು ಕುಂಠಿತಗೊಳಿಸಿತು.

ಇನ್ನೊಂದೆಡೆ ಬಿರುಸಿನ ಆಟವಾಡಿದ ಜೈಸ್ವಾಲ್ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. 44 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು.

ಶಿಮ್ರಾನ್ ಹೆಟ್ಮೆಯರ್ (6) ಸಹ ಔಟ್ ಆಗುವುದರೊಂದಿಗೆ 112ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಮುರಿಯದ ಆರನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ಕಟ್ಟಿದ ಅಶ್ವಿನ್ ಹಾಗೂ ರಿಯಾನ್ ಪರಾಗ್ (10*) ರಾಜಸ್ಥಾನ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

23 ಎಸೆತಗಳನ್ನು ಎದುರಿಸಿದ ಅಶ್ವಿನ್ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 40 ರನ್ ಗಳಿಸಿ ಔಟಾಗದೆ ಉಳಿದರು. ಸಿಎಸ್‌ಕೆ ಪರ ಪ್ರಶಾಂತ್ ಸೋಲಂಕಿ ಎರಡು ವಿಕೆಟ್ ಗಳಿಸಿದರು.

ಮೊಯಿನ್ ಹೋರಾಟ ವ್ಯರ್ಥ...

ಈ ಮೊದಲುಮೊಯಿನ್ ಅಲಿ ಆಕರ್ಷಕ ಅರ್ಧಶತಕದ (93) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್‌ನಲ್ಲಿ ಋತುರಾಜ್ ಗಾಯಕವಾಡ್ (2) ಅವರನ್ನು ಟ್ರೆಂಟ್ ಬೌಲ್ಟ್ ಔಟ್ ಮಾಡಿದರು.

ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಮೊಯಿನ್ ಅಲಿ ಬಿರುಸಿನ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು.

ಈ ಪೈಕಿ ಬೌಲ್ಟ್ ಅವರ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಸತತ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 26 ರನ್ ಗಳಿಸಿದರು. ಇದರಿಂದಾಗಿ ಪವರ್-ಪ್ಲೇನಲ್ಲಿ 75 ರನ್ ಹರಿದು ಬಂದಿದ್ದವು.

ಮೊಯಿನ್ ಹಾಗೂ ಕಾನ್ವೆ ದ್ವಿತೀಯ ವಿಕೆಟ್‌ಗೆ 83 ರನ್‌ಗಳ ಜೊತೆಯಾಟ ಕಟ್ಟಿದರು. ಈ ಜೋಡಿಯನ್ನು ಆರ್. ಅಶ್ವಿನ್ ಬೇರ್ಪಡಿಸಿದರು. ಕಾನ್ವೆ 16 ರನ್ ಗಳಿಸಿ ಔಟ್ ಆದರು.

ಎನ್. ಜಗದೀಶನ್ (1) ಹಾಗೂ ಅಂಬಟಿ ರಾಯುಡು (3) ಅವರಿಗೂ ಮಿಂಚಲು ಸಾಧ್ಯವಾಗಲಿಲ್ಲ. ಇದರಿಂದಾಗಿ 95ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿತು.

ಮೊಯಿನ್ ಉತ್ತಮ ಆಟವನ್ನು ಮುಂದುವರಿಸಿದರು. ಆದರೆ ಸತತವಾಗಿ ವಿಕೆಟ್‌ ನಷ್ಟವಾಗಿರುವುದು ಹಿನ್ನಡೆಗೆ ಕಾರಣವಾಯಿತು.

ಕೊನೆಯ ಹಂತದಲ್ಲಿ ಮೊಯಿನ್ ಜೊತೆ ಸೇರಿದ ನಾಯಕ ಮಹೇಂದ್ರ ಸಿಂಗ್ ಧೋನಿ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಈ ಮೂಲಕ ಚೆನ್ನೈ 150 ರನ್‌ಗಳ ಸ್ಫರ್ಧಾತ್ಮಕ ಮೊತ್ತ ಪೇರಿಸಿತು. 28 ಎಸೆತಗಳನ್ನು ಎದುರಿಸಿದ ಧೋನಿ 26 ರನ್ (ತಲಾ ಒಂದು ಬೌಂಡರಿ, ಸಿಕ್ಸರ್) ಗಳಿಸಿದರು.

57 ಎಸೆತಗಳನ್ನು ಎದುರಿಸಿದ ಮೊಯಿನ್ 93 ರನ್ ಗಳಿಸಿ ಔಟಾದರು. ಈ ಮೂಲಕ ಕೇವಲ ಏಳು ರನ್ ಅಂತರದಿಂದ ಶತಕ ವಂಚಿತರಾದರು. ಮೊಯಿನ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದ್ದವು.

ರಾಜಸ್ಥಾನ್ ಪರ ಯಜುವೇಂದ್ರ ಚಾಹಲ್ ಹಾಗೂ ಮೆಕೋಯ್ ತಲಾ ಎರಡು ಮತ್ತು ಅಶ್ವಿನ್ ಹಾಗೂ ಬೌಲ್ಟ್ ತಲಾ ಒಂದು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್...

ಈ ಮೊದಲುಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರು.

ಈ ಮೂಲಕ ಸಂಜು ಸ್ಯಾಮ್ಸನ್ ಮಗದೊಮ್ಮೆ ಟಾಸ್ ಸೋತಿದ್ದಾರೆ.

ರಾಜಸ್ಥಾನ್ ಈಗಾಗಲೇ ಪ್ಲೇ-ಆಫ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಆದರೆ 'ಕ್ವಾಲಿಫೈಯರ್ 1' ಖಚಿತಪಡಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಸೆಣಸಲಿವೆ. ಅಲ್ಲದೆ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತರೂ ಎರಡನೇ ಕ್ವಾಲಿಫೈಯರ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.

ಈ ಮೂಲಕ ಫೈನಲ್‌ಗೆ ಪ್ರವೇಶಿಸಲು ಎರಡು ಅವಕಾಶಗಳು ಸಿಗಲಿವೆ.

ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್, ಕೊನೆಯ ಪಂದ್ಯದಲ್ಲಿ ಗೆದ್ದರೆ 18 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಲಿದೆ. ಲಖನೌ ಸೂಪರ್ ಜೈಂಟ್ಸ್ ಅಷ್ಟೇ ಅಂಕಗಳನ್ನು ಹೊಂದಿದ್ದರೂ ರನ್ ರೇಟ್ ಲೆಕ್ಕಾಚಾರದಲ್ಲಿ ಹಿಂದೆ ಬೀಳಲಿದೆ.

ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್, ಈಗಾಗಲೇ ಮೊದಲ ಕ್ವಾಲಿಫೈಯರ್‌ ಹೋರಾಟವನ್ನು ಖಚಿತಪಡಿಸಿದೆ.

ಅತ್ತ ಒಂಬತ್ತನೇ ಸ್ಥಾನದಲ್ಲಿರುವ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಈ ಪಂದ್ಯ ಪ್ರತಿಷ್ಠೆಗಷ್ಟೇ ಸೀಮಿತಗೊಂಡಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.