ADVERTISEMENT

IPL 2022: ಮುಂಬೈಗೆ ಸೂರ್ಯ ಬಲ; ರಾಯಲ್ಸ್‌ಗೆ ಗೆಲ್ಲುವ ಛಲ

ರೋಹಿತ್ ಶರ್ಮಾ–ಸಂಜು ಸ್ಯಾಮ್ಸನ್‌ ಮುಖಾಮುಖಿ: ಆತ್ಮವಿಶ್ವಾಸದಲ್ಲಿ ರಾಜಸ್ಥಾನ ತಂಡ

ಪಿಟಿಐ
Published 1 ಏಪ್ರಿಲ್ 2022, 16:11 IST
Last Updated 1 ಏಪ್ರಿಲ್ 2022, 16:11 IST
ಸೂರ್ಯಕುಮಾರ್ ಯಾದವ್ 
ಸೂರ್ಯಕುಮಾರ್ ಯಾದವ್    

ಮುಂಬೈ: ಮೊದಲ ಪಂದ್ಯದಲ್ಲಿ ಜಯದ ಬೆಲ್ಲದ ಸಿಹಿಯುಂಡು ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಆರಂಭದಲ್ಲಿಯೇ ಸೋಲಿನ ಕಹಿಯುಂಡಿರುವ ಮುಂಬೈ ಇಂಡಿಯನ್ಸ್ ಶನಿವಾರ ಮುಖಾಮುಖಿಯಾಗಲಿವೆ.

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ಬಳಗವು ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯಿಸಿತ್ತು. ಆ ಪಂದ್ಯದಲ್ಲಿ ಸಂಜು ಮತ್ತು ದೇವದತ್ತ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಮಾಡಿದ್ದರು. ವಿಂಡೀಸ್ ಆಟಗಾರ ಹೆಟ್ಮೆಯರ್ ಕೂಡ ಅಬ್ಬರಿಸಿದ್ದರು. ಅದರಿಂದಾಗಿ ದೊಡ್ಡ ಮೊತ್ತ ಪೇರಿಸಿತ್ತು. ಐಪಿಎಲ್‌ನ ‘ಸ್ಟಾರ್’ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ರಾಯಲ್ಸ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.ಮುಂಬೈ ಎದುರಿನ ಪಂದ್ಯದಲ್ಲಿಯೂ ಅದೇ ತಂಡವನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

ಆದರೆ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಬಳಗವು ಡೆಲ್ಲಿ ಕ್ಯಾಪಿಟಲ್ಸ್ ಎದುರು ಬ್ಯಾಟಿಂಗ್‌ನಲ್ಲಿ ಮಿಂಚಿತ್ತು. ಆದರೆ, ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿತ್ತು. ಜಸ್‌ಪ್ರೀತ್ ಬೂಮ್ರಾ, ಡ್ಯಾನಿಲ್ ಸ್ಯಾಮ್ಸ್ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಬಾಸಿಲ್ ಥಂಪಿ ಮತ್ತು ಮುರುಗನ್ ಅಶ್ವಿನ್ ಯಶಸ್ವಿಯಾಗಿದ್ದರೂ ತಂಡದ ಗೆಲುವು ಸಾಧ್ಯವಾಗಿರಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಹೆಚ್ಚು ಚಿಂತೆಯಿಲ್ಲ. ರೋಹಿತ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಉತ್ತಮ ಲಯದಲ್ಲಿದ್ಧಾರೆ. ಸೂರ್ಯಕುಮಾರ್ ಯಾದವ್ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಬೌಲಿಂಗ್‌ನಲ್ಲಿ ಸುಧಾರಣೆಯಾದರೆ ಎದುರಾಳಿ ಬಳಗಕ್ಕೆ ಕಠಿಣ ಪೈಪೋಟಿಯೊಡ್ಡಲು ತಂಡಕ್ಕೆ ಸಾಧ್ಯವಾಗಲಿದೆ.

ADVERTISEMENT

ತಂಡಗಳು: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಡ್ಯಾನಿಲ್ ಸ್ಯಾಮ್ಸ್, ಮುರುಗನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಟೈಮಲ್ ಮಿಲ್ಸ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಾಲ್, ಸಂಜಯ್ ಯಾದವ್.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ–ವಿಕೆಟ್‌ಕೀಪರ್), ದೇವದತ್ತ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಶಿಮ್ರೊನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್. ಅಶ್ವಿನ್, ನೇಥನ್ ಕೌಲ್ಟರ್‌ನೈಲ್, ಯಜುವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ, ನವದೀಪ್ ಸೈನಿ, ಕೆ.ಸಿ. ಕಾರ್ಯಪ್ಪ, ಕರುಣ್ ನಾಯರ್.

**
ಹಾರ್ದಿಕ್ ಬಳಗಕ್ಕೆ ರಿಷಭ್ ಜಿದ್ದಾಜಿದ್ದಿ ಇಂದು
ಪುಣೆ (ಪಿಟಿಐ):
ಛಲದ ಹೋರಾಟಗಾರ ರಿಷಭ್ ಪಂತ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ತಂಡಗಳು ಶನಿವಾರ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಐಪಿಎಲ್‌ ಟೂರ್ನಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯ ಆಡಿವೆ. ರಿಷಭ್ ನಾಯಕತ್ವದ ಡೆಲ್ಲಿ ತಂಡವು ಮುಂಬೈ ಇಂಡಿಯನ್ಸ್ ಎದುರು ಮತ್ತು ಹಾರ್ದಿಕ ಪಾಂಡ್ಯ ಮುಂದಾಳತ್ವದ ಗುಜರಾತ್ ಟೈಟನ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್‌ ವಿರುದ್ಧ ಜಯಿಸಿವೆ.

ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ, ರಿಷಭ್, ಲಲಿತ್ ಯಾದವ್, ರೋವ್ಮನ್ ಪಾಲ್, ಅಲ್‌ರೌಂಡರ್ ಅಕ್ಷರ್ ಪಟೇಲ್, ಮನದೀಪ್ ಸಿಂಗ್, ಶಾರ್ದೂಲ್ ಠಾಕೂರ್ ಅವರು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಇದೀಗ ಮೂರು ದಿನಗಳ ಕ್ವಾರಂಟೈನ್ ಮುಗಿಸಿರುವ ಲುಂಗಿ ಗಿಡಿ, ಮುಸ್ತಫಿಜುರ್ ರೆಹಮಾನ್ ಮತ್ತು ಸರ್ಫರಾಜ್ ಖಾನ್ ಕೂಡ ಕಣಕ್ಕಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್ ತಂಡವೂ ಗೆಲುವಿನ ಆರಂಭದಿಂದ ಆತ್ಮವಿಶ್ವಾಸದಲ್ಲಿದೆ. ತಂಡದ ಸ್ಪಿನ್ನರ್ ರಶೀದ್ ಖಾನ್, ಕನ್ನಡಿಗ ಬ್ಯಾಟರ್ ಅಭಿನವ್ ಸದಾರಂಗಿನಿ, ರಾಹುಲ್ ತೆವಾಟಿಯಾ, ಶುಭಮನ್ ಗಿಲ್, ಬೌಲರ್ ಮೊಹಮ್ಮದ್ ಶಮಿ ಅಮೋಘ ಲಯದಲ್ಲಿದ್ದಾರೆ. ಡೆಲ್ಲಿ ತಂಡಕ್ಕೆ ಕಠಿಣ ಪೈಪೋಟಿಯೊಡ್ಡಲು ಸಿದ್ಧರಾಗಿದ್ಧಾರೆ.

ರಾತ್ರಿಯ ಪಂದ್ಯ ಇದಾಗಿರುವುದರಿಂದ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಧಾರವೂ ಪ್ರಮುಖವಾಗಲಿದೆ.

**
ಪ್ರೇಕ್ಷಕರ ಪ್ರವೇಶ: ಶೇ 50ಕ್ಕೆ ಹೆಚ್ಚಳ
ಮುಂಬೈ ಮತ್ತು ಪುಣೆಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವವರ ಸಂಖ್ಯೆಯನ್ನು ಇದೇ ಆರರಿಂದ ಶೇ 50ಕ್ಕೆ ಏರಿಸಲಾಗುತ್ತಿದೆ ಎಂದು ಟಿಕೆಟ್ ಮಾರಾಟದ ಉಸ್ತುವಾರಿ ವಹಿಸಿರುವ ಬುಕ್‌ಮೈ ಶೋ ಸಂಸ್ಥೆಯು ತಿಳಿಸಿದೆ.

ಮೊದಲ ಪಂದ್ಯದಿಂದಲೂ ಕ್ರೀಡಾಂಗಣಗಳ ಆಸನ ಸಾಮರ್ಥ್ಯದ ಶೇ 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕೊಡಲಾಗಿತ್ತು.

ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಜಾರಿಯಲ್ಲಿರುವ ಏಪ್ರಿಲ್ 2ರಿಂದ ಕೋವಿಡ್ ತಡೆ ನಿಬಂಧನೆಗಳನ್ನು ರದ್ದುಪಡಿಸಲು ನಿರ್ಧರಿಸಿದೆ. ಇದರಿಂದಾಗಿ ಕ್ರಿಕೆಟ್ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶದ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.