ADVERTISEMENT

ಬೇಜವಾಬ್ದಾರಿಯುತ ಆಟ - ಮುಂಬೈ ಸೋಲಿಗೆ ಬ್ಯಾಟರ್‌ಗಳನ್ನು ದೂಷಿಸಿದ ರೋಹಿತ್

ಪಿಟಿಐ
Published 25 ಏಪ್ರಿಲ್ 2022, 12:18 IST
Last Updated 25 ಏಪ್ರಿಲ್ 2022, 12:18 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್, ಸತತ ಎಂಟನೇ ಸೋಲಿನ ಮುಖಭಂಗಕ್ಕೊಳಗಾಗಿದೆ.

ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಮುಂಬೈ 36 ರನ್ ಅಂತರದ ಸೋಲಿಗೆ ಶರಣಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ರೋಹಿತ್ ಶರ್ಮಾ, ಬ್ಯಾಟರ್‌ಗಳ ಬೇಜವಾಬ್ದಾರಿಯುತ ಆಟವೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

'ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಎಂದು ಭಾವಿಸುತ್ತೇನೆ. ಇದು (ವಾಂಖೆಡೆ) ಬ್ಯಾಟಿಂಗ್ ಮಾಡಲು ಉತ್ತಮ ಪಿಚ್ ಆಗಿತ್ತು. ಆದರೆ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಈ ಮೊತ್ತವನ್ನು ಚೇಸ್ ಮಾಡಬಹುದಿತ್ತು. ಇಂತಹ ಗುರಿ ಬೆನ್ನಟ್ಟುವಾಗ ಜೊತೆಯಾಟ ಮುಖ್ಯವೆನಿಸುತ್ತದೆ. ಆದರೆ ನಮ್ಮಿಂದ ಜೊತೆಯಾಟ ಕಟ್ಟಲು ಸಾಧ್ಯವಾಗಲಿಲ್ಲ. ನಾನು ಸೇರಿದಂತೆ ಬ್ಯಾಟರ್‌ಗಳು ಬೇಜವಾಬ್ದಾರಿ ಹೊಡೆತಗಳಿಂದ ವಿಕೆಟ್‌ಗಳನ್ನು ಕಳೆದುಕೊಂಡೆವು' ಎಂದು ಹೇಳಿದರು.

'ಟೂರ್ನಿಯಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಬ್ಯಾಟರ್‌ಗಳು ದೀರ್ಘ ಇನ್ನಿಂಗ್ಸ್ ಆಡಬೇಕಿತ್ತು. ಎದುರಾಳಿ ತಂಡಗಳಿಂದ ಸಾಧ್ಯವಾಗಿದೆ. ಇದು ಹಿನ್ನಡೆಗೆ ಕಾರಣವಾಗಿದೆ' ಎಂದು ಹೇಳಿದರು.

ಸತತ ಎಂಟು ಸೋಲು ಎದುರಿಸಿರುವ ಮುಂಬೈ ತಂಡದ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ. ಹಾಗಾಗಿ ಹನ್ನೊಂದರ ಬಳಗದಲ್ಲಿ ಬದಲಾವಣೆ ತರಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಹಿತ್, 'ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದವದರು ಸಾಕಷ್ಟು ಅವಕಾಶ ಪಡೆಯುತ್ತಾರೆ ಎಂಬುದನ್ನು ಖಾತ್ರಿಪಡಿಸಲು ಬಯಸುತ್ತೇವೆ. ಹಾಗಾಗಿ ಹೆಚ್ಚಿನ ಬದಲಾವಣೆಗಳನ್ನು ಮಾಡದಿರಲು ಪ್ರಯತ್ನಿಸುತ್ತೇವೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.