ADVERTISEMENT

IPL 2022 RCB vs LSG: ಡುಪ್ಲೆಸಿ ಮಿಂಚು:, ಗೆಲುವಿನ ನಗೆ ಬೀರಿದ ಆರ್‌ಸಿಬಿ

ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಆರ್‌ಸಿಬಿ: ಹರ್ಷಲ್‌ ಪಟೇಲ್‌ಗೆ ಎರಡು ವಿಕೆಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2022, 8:54 IST
Last Updated 20 ಏಪ್ರಿಲ್ 2022, 8:54 IST
ಅರ್ಧಶತಕ ಗಳಿಸಿ ಸಂಭ್ರಮಿಸಿದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ (ಕೃಪೆ – ಐಪಿಎಲ್ ಟ್ವಿಟರ್ ಖಾತೆ)
ಅರ್ಧಶತಕ ಗಳಿಸಿ ಸಂಭ್ರಮಿಸಿದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ (ಕೃಪೆ – ಐಪಿಎಲ್ ಟ್ವಿಟರ್ ಖಾತೆ)   

ನವಿ ಮುಂಬೈ: ಫಫ್ ಡುಪ್ಲೆಸಿ ಅಮೋಘ ಬ್ಯಾಟಿಂಗ್ ಮತ್ತು ಜೋಶ್ ಹ್ಯಾಜಲ್‌ವುಡ್ ಚಾಣಾಕ್ಷ ಬೌಲಿಂಗ್‌ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಭೇರಿ ಬಾರಿಸಿತು.

ಮಂಗಳವಾರ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿಬೆಂಗಳೂರು ತಂಡವು 18 ರನ್‌ಗಳಿಂದ ಲಖನೌ ಸೂಪರ್ ಜೈಂಟ್ಸ್‌ ವಿರುದ್ಧ ಜಯಿಸಿತು. ಟಾಸ್ ಗೆದ್ದ ಲಖನೌ ತಂಡದ ನಾಯಕ ಕೆ.ಎಲ್.ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್‌ನಲ್ಲಿಯೇ ಏಳು ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಬೆಂಗಳೂರು ಸಂಕಷ್ಟಕ್ಕೊಳಗಾಯಿತು.

ನಾಯಕನಿಗೆ ತಕ್ಕ ಆಟವಾಡಿದ ಡುಪ್ಲೆಸಿ (96; 64ಎಸೆತ, 4X11, 6X2) ನಾಲ್ಕು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಆದರೆ, ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 181 ರನ್ ಗಳಿಸಲು ಕಾರಣರಾದರು. ಗುರಿ ಬೆನ್ನಟ್ಟಿದ ಲಖನೌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 ರನ್‌ ಗಳಿಸಲಷ್ಟೇ ಶಕ್ತವಾಯಿತು. ಜೋಶ್ (25ಕ್ಕೆ4) ಮತ್ತು ಹರ್ಷಲ್ ಪಟೇಲ್ (47ಕ್ಕೆ2) ರಾಹುಲ್ ಬಳಗವನ್ನು ಕಟ್ಟಿಹಾಕಿದರು. ಫಫ್ ಬಳಗಕ್ಕೆ ಇದು ಐದನೇ ಜಯ.

ADVERTISEMENT

ವಿರಾಟ್ ಡಕ್:ಮೊದಲ ಓವರ್‌ನಲ್ಲಿಯೇ ಮಧ್ಯಮವೇಗಿ ದುಷ್ಮಂತ ಚಮೀರಾ ಮೇಲುಗೈ ಸಾಧಿಸಿದರು. ಐದನೇ ಎಸೆತದಲ್ಲಿ ಅನುಜ್ ರಾವತ್ ಬೌಂಡರಿಗಟ್ಟಲು ಪ್ರಯತ್ನಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಮಾಡಿದ ರಾಹುಲ್ ಸಂಭ್ರಮಿಸಿದರು. ನಂತರದ ಎಸೆತದಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಫೀಲ್ಡರ್‌ ದೀಪಕ್ ಹೂಡಾಗೆ ಸುಲಭದ ಕ್ಯಾಚ್ ಕೊಟ್ಟ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದರು.

ಫಫ್ –ಶಾಬಾಜ್ ಜೊತೆಯಾಟ: ಫಫ್ ಹೋರಾಟಕ್ಕೆ ತಕ್ಕ ಜೊತೆ ನೀಡಿದವರು ಶಾಬಾಜ್ ಅಹಮದ್ (26; 22ಎ) ಒಬ್ಬರೇ. ಇವರಿಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಸೇರಿಸಿದರು.16ನೇ ಓವರ್‌ನಲ್ಲಿ ರಾಹುಲ್ ಚುರುಕಿನ ಫೀಲ್ಡಿಂಗ್ ಮತ್ತು ಜೇಸನ್ ಹೋಲ್ಡರ್‌ ಕೈಚಳಕದ ಫಲವಾಗಿ ಶಾಬಾಜ್ ರನ್‌ಔಟ್ ಆದರು. ಜೊತೆಯಾಟ ಮುರಿಯಿತು.ಆದರೆ ಫಫ್ ಶತಕದತ್ತ ದಾಪುಗಾಲು ಹಾಕಿದ್ದರು. ಕೊನೆಯ ಓವರ್‌ನವರೆಗೂ ತಂಡದ ಮೊತ್ತ ಹೆಚ್ಚಿಸಲು ಆದ್ಯತೆ ನೀಡಿದರು. ಆದರೆ ಕೊನೆಯ ಓವರ್‌ನಲ್ಲಿ ಔಟಾದರು.

ಕೃಣಾಲ್ ಹೋರಾಟ: ಲಖನೌ ತಂಡದಲ್ಲಿ ಕ್ವಿಂಟನ್ ಡಿಕಾಕ್, ಮನೀಷ್ ಪಾಂಡೆ ಒಂದಂಕಿ ಮೊತ್ತ ಗಳಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ರಾಹುಲ್ (30 ರನ್), ಕೃಣಾಲ್ ಪಾಂಡ್ಯ (42; 28ಎ) ಹಾಗೂ ಮಾರ್ಕಸ್ ಸ್ಟೊಯಿನಿಸ್ ಅವರ ಹೋರಾಟ ಸಾಕಾಗಲಿಲ್ಲ. ಉತ್ತಮ ಬೌಲಿಂಗ್ ಮಾಡಿದ ಹ್ಯಾಜಲ್‌ವುಡ್‌ ಲಖನೌಗೆ ಸಿಂಹಸ್ವಪ್ನವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.