ADVERTISEMENT

IPL 2022 RCB vs SRH: 68 ರನ್ನಿಗೆ ಆಲೌಟ್; ಆರ್‌ಸಿಬಿಗೆ ಹೀನಾಯ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2022, 16:32 IST
Last Updated 23 ಏಪ್ರಿಲ್ 2022, 16:32 IST
   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂಬತ್ತುವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಮಾರ್ಕೊ ಜಾನ್ಸೆನ್ (25ಕ್ಕೆ 3) ಹಾಗೂ ಟಿ. ನಟರಾಜನ್ (10ಕ್ಕೆ 3) ದಾಳಿಗೆ ಸಿಲುಕಿ 16.1 ಓವರ್‌ಗಳಲ್ಲಿ ಕೇವಲ 68 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಬಳಿಕ ಗುರಿ ಬೆನ್ನಟ್ಟಿದ ಹೈದರಾಬಾದ್, 8 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಅಭಿಷೇಕ್ ಶರ್ಮಾ (47) ಹಾಗೂ ಕೇನ್ ವಿಲಿಯಮ್ಸನ್ (16*) ಮೊದಲ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನು ಸುಲಭಗೊಳಿಸಿದರು.

ADVERTISEMENT

ಆರ್‌ಸಿಬಿ 68ಕ್ಕೆ ಆಲೌಟ್...

ಈ ಮೊದಲು ಮಾರ್ಕೊ ಜಾನ್ಸೆನ್ (25ಕ್ಕೆ 3) ಹಾಗೂ ಟಿ. ನಟರಾಜನ್ (10ಕ್ಕೆ 3) ಸೇರಿದಂತೆ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16.1 ಓವರ್‌ಗಳಲ್ಲಿ ಕೇವಲ 68ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಮುಂಬೈನ ಬ್ರೆಬೊರ್ನ್ ಮೈದಾನದಲ್ಲಿ ಶನಿವಾರ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಬೆಂಗಳೂರು ತಂಡದ ಯೋಜನೆಗಳೆಲ್ಲ ತಲೆಕೆಳಗಾದವು.

ದಿಢೀರ್ ಕುಸಿತ ಕಂಡ ಬೆಂಗಳೂರಿನ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಆರಂಭದಲ್ಲೇ ಮಾರ್ಕೊ ಜಾನ್ಸೆನ್ ಬಲವಾದ ಪೆಟ್ಟು ನೀಡಿದರು. ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಫಫ್ ಡುಪ್ಲೆಸಿ (5), ವಿರಾಟ್ ಕೊಹ್ಲಿ (0) ಹಾಗೂ ಅನುಜ್ ರಾವತ್ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಈ ಮೂಲಕ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಸಾಧನೆ ಮಾಡಿದರು.

ಈ ಪೈಕಿ ಕೊಹ್ಲಿ ಸತತ ಎರಡನೇ ಬಾರಿಗೆ ಗೋಲ್ಡನ್ ಡಕ್‌ಗೆ ಔಟ್ ಆದರು. ಗ್ಲೆನ್ ಮ್ಯಾಕ್ಸೆವೆಲ್‌ಗೆ (12) ಟಿ. ನಟರಾಜನ್ ಪೆವಿಲಿಯನ್ ಹಾದಿ ತೋರಿಸಿದರು. ಇದರಿಂದಾಗಿ 20 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು.

ಬಳಿಕ ಕನ್ನಡಿಗ ಜಗದೀಶ್ ಸುಚಿತ್ ಸ್ಪಿನ್ ಮೋಡಿ ಮಾಡಿದರು. ಸುಯಶ್ ಪ್ರಭುದೇಸಾಯಿ (15) ಹಾಗೂ ದಿನೇಶ್ ಕಾರ್ತಿಕ್ (0) ಬಲೆಗೆ ಬಿದ್ದರು.

ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಂತಿಮವಾಗಿ 16.1 ಓವರ್‌ಗಳಲ್ಲಿ 68 ರನ್ನಿಗೆ ಆಲೌಟ್ ಆಯಿತು. ಇನ್ನುಳಿದಂತೆ ಶಹಬಾಜ್ ಅಹ್ಮದ್ 7, ಹರ್ಷಲ್ ಪಟೇಲ್ 4, ವನಿಂದು ಹಸರಂಗ 8, ಮೊಹಮ್ಮದ್ ಸಿರಾಜ್ 2 ಹಾಗೂ ಜೋಶ್ ಹ್ಯಾಜಲ್‌ವುಡ್ 3* ರನ್ ಗಳಿಸಿದರು.

ಆರ್‌ಸಿಬಿ ಪರ ಮ್ಯಾಕ್ಸ್‌ವೆಲ್ ಹಾಗೂ ಪ್ರಭುದೇಸಾಯಿ ಹೊರತುಪಡಿಸಿ ಇತರೆ ಯಾವ ಬ್ಯಾಟರ್ ಎರಡಂಕಿಯನ್ನು ದಾಟಲಿಲ್ಲ.

ಹೈದರಾಬಾದ್ ಪರ ಮಾರ್ಕೊ ಜಾನ್ಸೆನ್ ಮೂರು ಹಾಗೂ ಟಿ. ನಟರಾಜನ್ ತಲಾ ಮೂರು ಮತ್ತು ಜಗದೀಶ ಸುಚಿತ್ ಎರಡು ವಿಕೆಟ್ ಕಿತ್ತು ಮಿಂಚಿದರು. ಉಮ್ರಾನ್ ಮಲಿಕ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್...
ಈ ಮೊದಲುಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಮಯ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಇದು ಆರ್‌ಸಿಬಿಯ ಬ್ಯಾಟಿಂಗ್ ಪಡೆ ಹಾಗೂ ಸನ್‌ರೈಸರ್ಸ್ ಬೌಲರ್‌ಗಳ ನಡುವಣ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ.

ಒಂದು ಕಡೆ ಸ್ಫೋಟಕ ಶೈಲಿಯ ಬ್ಯಾಟರ್‌ಗಳಾದ ಫಫ್ ಡುಪ್ಲೆಸಿ, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್. ಇನ್ನೊಂದೆಡೆ ಸ್ವಿಂಗ್ ಮೋಡಿ ಮಾಡುವ ಉಮ್ರನ್ ಮಲಿಕ್, ಭುವನೇಶ್ವರ್ ಕುಮಾರ್ ಹಾಗೂ ಯಾರ್ಕರ್ ಪರಿಣತ ಟಿ. ನಟರಾಜನ್. ಶನಿವಾರ ರಾತ್ರಿ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಇವರಲ್ಲಿ ಮೇಲುಗೈ ಸಾಧಿಸುವವರಿಗೇ ಜಯ ಒಲಿಯುವುದು ಖಚಿತ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ದಾಖಲಿಸಿದೆ. ಅತ್ತ ಸನ್‌ರೈಸರ್ಸ್ ಆಡಿದ ಆರು ಪಂದ್ಯಗಳ ಪೈಕಿ ಮೊದಲೆರಡರಲ್ಲಿ ಸೋತರೂ ನಂತರ ಪುಟಿದೆದ್ದು ಸತತ ಜಯ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.