ADVERTISEMENT

IPL-2022: ಸನ್‌ರೈಸರ್ಸ್ ತಂಡದ ಸಹಾಯಕ ಕೋಚ್‌ ಸ್ಥಾನಕ್ಕೆ ಸೈಮನ್ ರಾಜೀನಾಮೆ

ಪಿಟಿಐ
Published 18 ಫೆಬ್ರುವರಿ 2022, 12:57 IST
Last Updated 18 ಫೆಬ್ರುವರಿ 2022, 12:57 IST
ಸೈಮನ್ ಕ್ಯಾಟಿಚ್ –ಪ್ರಜಾವಾಣಿ ಚಿತ್ರ
ಸೈಮನ್ ಕ್ಯಾಟಿಚ್ –ಪ್ರಜಾವಾಣಿ ಚಿತ್ರ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ನ ಸಹಾಯಕ ಕೋಚ್‌ ಸೈಮನ್ ಕ್ಯಾಟಿಚ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈಚೆಗೆ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೆಲವು ಅಟಗಾರರ ಖರೀದಿಗೆ ಸಂಬಂಧಿಸಿ ಅಸಮಾಧಾನ ವ್ಯಕ್ತಪಡಿಸಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಕಾವ್ಯ ಮಾರನ್ ಮುಖ್ಯಸ್ಥರಾಗಿರುವ ಸನ್‌ರೈಸರ್ಸ್ ಫ್ರಾಂಚೈಸ್ ಈ ವರೆಗೆ ಕ್ಯಾಟಿಚ್ ಅವರ ರಾಜೀನಾಮೆ ಕುರಿತು ಅಧಿಕೃತ ಪ್ರಕಟಣೆ ನೀಡಲಿಲ್ಲ. ಆದರೆ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು ಸೈಮನ್ ಹೆಲ್ಮಾಟ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎನ್ನಲಾಗಿದೆ. ಹೆಲ್ಮಾಟ್ ಈ ಹಿಂದೆ ಸನ್‌ರೈಸರ್ಸ್‌ ಫ್ರಾಂಚೈಸ್ ಜೊತೆ ಇದ್ದರು.

ADVERTISEMENT

ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಕ್ಯಾಟಿಚ್ ಅವರನ್ನು ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರಾ ಮತ್ತು ಭಾರತದ ಹೇಮಾಂಗ್ ಬದಾನಿ ಅವರ ಜೊತೆ ಸನ್‌ರೈಸರ್ಸ್‌ನ ಸಿಬ್ಬಂದಿ ಪಟ್ಟಿಗೆ ಸೇರಿಸಲಾಗಿತ್ತು. ಟಾಮ್ ಮೂಡಿ ಮತ್ತು ಮುತ್ತಯ್ಯ ಮುರಳೀಧರನ್ ಅವರು ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹರಾಜು ಪ್ರಕ್ರಿಯೆಗೂ ಮೊದಲುತಂಡದಲ್ಲಿ ಕೈಗೊಂಡ ತೀರ್ಮಾನಗಳಿಗೆ ತಕ್ಕಂತೆ ಆಟಗಾರರ ಖರೀದಿ ನಡೆಯಲಿಲ್ಲ. ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತ್ರಿಪಾಠಿ ಅವರಿಗೆ ಕ್ರಮವಾಗಿ ₹10.75 ಕೋಟಿ, ₹ 8.75 ಕೋಟಿ ಹಾಗೂ ₹ 8.50 ಕೋಟಿ ಮೊತ್ತ ನೀಡಲಾಗಿತ್ತು. ಎಡಗೈ ಸ್ಪಿನ್ನರ್ ಅಭಿಷೇಕ್ ಶರ್ಮಾ ಅವರನ್ನು ₹ 6.75 ಕೋಟಿಗೆ ಖರೀದಿಸಲಾಗಿತ್ತು. ಇಂಥ ಖರೀದಿಯಿಂದ ತಂಡಕ್ಕೆ ದೊಡ್ಡ ಪ್ರಯೋಜನ ಆಗಲಾರದು ಎಂಬುದು ಕ್ಯಾಟಿಚ್‌ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.