ADVERTISEMENT

IPL 2022 | ಲಿಯಾಮ್ ಮಿಂಚು; ಲೀಗ್ ಹಂತದ ಕೊನೆಯ ಹಣಾಹಣಿಯಲ್ಲಿ ಪಂಜಾಬ್‌ಗೆ ಜಯ

ಪಿಟಿಐ
Published 22 ಮೇ 2022, 18:28 IST
Last Updated 22 ಮೇ 2022, 18:28 IST
ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ
ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ   

ಮುಂಬೈ: ಸ್ಫೋಟಕ ಬ್ಯಾಟಿಂಗ್ ಮಾಡಿದ ಲಿಯಾಮ್ ಲಿವಿಂಗ್‌ಸ್ಟೋನ್ ಒಂದು ರನ್‌ನಿಂದ ಅರ್ಧಶತಕ ತಪ್ಪಿಸಿ ಕೊಂಡರು. ಆದರೆ ಪಂಜಾಬ್ ಕಿಂಗ್ಸ್‌ ತಂಡಕ್ಕೆ ಭರ್ಜರಿ ಜಯದ ಕಾಣಿಕೆ ನೀಡುವಲ್ಲಿ ಅವರು ಯಶಸ್ವಿಯಾದರು.

ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ 5 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಗಳಿಸಿತು.

158 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ 16ನೇ ಓವರ್‌ನ ಮೊದಲ ಎಸೆತದಲ್ಲೇ ದಡ ಸೇರಿತು. 5ನೇ ಕ್ರಮಾಂಕದ ಲಿಯಾಮ್ ಲಿವಿಂಗ್‌ಸ್ಟೋನ್ 5 ಸಿಕ್ಸರ್‌ ಮತ್ತು 2 ಬೌಂಡರಿಗಳೊಂದಿಗೆ ಕೇವಲ 22 ಎಸೆತಗಳಲ್ಲಿ 49 ರನ್ ಗಳಿಸಿ ಔಟಾಗದೆ ಉಳಿದರು.

ADVERTISEMENT

ಟಾಸ್ ಗೆದ್ದ ಸನ್‌ರೈಸರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನೇಥನ್ ಎಲ್ಲಿಸ್ ಮತ್ತು ಹರಪ್ರೀತ್ ಬ್ರಾರ್ ದಾಳಿಗೆ ಸನ್‌ರೈಸರ್ಸ್ ಬ್ಯಾಟರ್‌ಗಳು ನಲುಗಿದರು. ಹೀಗಾಗಿ 8 ವಿಕೆಟ್‌ಗಳಿಗೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಅಭಿಷೇಕ್ ಶರ್ಮಾ (43; 32ಎ, 4X5, 6X2) ಒಬ್ಬರೇ ಮಿಂಚಿದರು.

ವೇಗಿ ಕಗಿಸೊ ರಬಾಡ ಮೂರನೇ ಓವರ್‌ನಲ್ಲಿಯೇ ಪ್ರಿಯಂ ಗರ್ಗ್ ವಿಕೆಟ್ ಗಳಿಸಿದರು. ಎಡಗೈ ಬೌಲರ್ ಹರ್‌ಪ್ರೀತ್ ಬ್ರಾರ್ (26ಕ್ಕೆ3) ಏಡನ್ ಮರ್ಕರಂ, ರಾಹುಲ್ ತ್ರಿಪಾಠಿ ಮತ್ತು ಅಭಿಷೇಕ್ ವರ್ಮಾ ಅವರ ವಿಕೆಟ್‌ ಕಬಳಿಸಿದರು. 100ರ ಗಡಿ ಮುಟ್ಟುವ ಮುನ್ನವೇ ತಂಡ 5 ವಿಕೆಟ್‌ ಕಳೆದುಕೊಂಡಿತು. ನಿಕೊಲಸ್ ಪೂರನ್ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್‌ಗಳನ್ನು ಗಳಿಸಿದ ನೇಥನ್ ಎಲ್ಲಿಸ್ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು.

ನೋಬಾಲ್– ರನೌಟ್: ನೇಥನ್ ಹಾಕಿದ ಇನಿಂಗ್ಸ್‌ನ ಕೊನೆಯ ಓವರ್‌ನ ಅಂತಿಮ ಎಸೆತವು ನೋಬಾಲ್ ಆಯಿತು. ಇದರಲ್ಲಿ ಒಂದು ರನ್ ಓಡಲು ಯತ್ನಿಸಿದ ಭುವನೇಶ್ವರ್ ಕುಮಾರ್ ಅವರನ್ನು ವಿಕೆಟ್‌ಕೀಪರ್ ಜಿತೇಶ್ ಶರ್ಮಾ ರನೌಟ್ ಮಾಡುವಲ್ಲಿ ಸಫಲರಾದರು.ಫ್ರೀ ಹಿಟ್‌ನಲ್ಲಿ ರನ್‌ ಗಳಿಸಲು ಉಮ್ರಾನ್ ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.