ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಗುರುವಾರ ನಡೆದಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ ಅಂತಿಮ ಓವರ್‌ನಲ್ಲಿ 17 ರನ್ ಬೇಕಾಗಿತ್ತು.
ಜಯದೇವ ಉನದ್ಕತ್ ಹಾಕಿದ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಡ್ವೇನ್ ಪ್ರಿಟೋರಿಯಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಬಿರುಸಿನ 22 ರನ್ ಗಳಿಸಿದ ಪ್ರಿಟೋರಿಯಸ್ ವಿಕೆಟ್ ಪತನದೊಂದಿಗೆ ಚೆನ್ನೈ ಸೋಲಿನ ಭೀತಿಗೆ ಒಳಗಾಗಿತ್ತು.
ಆದರೆ ಕ್ರೀಸಿನ ಇನ್ನೊಂದು ತುದಿಯಲ್ಲಿ ಫಿನಿಶರ್ ಧೋನಿ ತಮ್ಮ ಅವಕಾಶಕ್ಕಾಗಿ ಹಾತೊರೆಯುತ್ತಿದ್ದರು. ಎರಡನೇ ಎಸೆತದಲ್ಲಿ ಡ್ವೇನ್ ಬ್ರಾವೊ ಒಂದು ರನ್ ಗಳಿಸಿದರು.
ಇದುವೇ ಪಂದ್ಯದ ತಿರುವಿಗೆ ಕಾರಣವಾಯಿತು. ಧೋನಿ ಸ್ಟ್ರೈಕ್‌ಗೆ ಮರಳಿದರು. ಮೂರನೇ ಹಾಗೂ ನಾಲ್ಕನೇ ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಧೋನಿ ಅಬ್ಬರಿಸಿದರು.
ಐದನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಚಾಣಾಕ್ಷತನ ಮೆರೆದರು. ಕೊನೆಯ ಎಸೆತದಲ್ಲಿ ಗೆಲುವಿಗೆ ನಾಲ್ಕು ರನ್ ಬೇಕಾಗಿತ್ತು.
ಆದರೆ 'ಫಿನಿಶಿಂಗ್' ಸಾಮರ್ಥ್ಯ ತಮ್ಮಲ್ಲಿ ಇನ್ನೂ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿದ ಧೋನಿ, ಅಂತಿಮ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಚೆನ್ನೈಗೆ ರೋಚಕ ಗೆಲುವು ತಂದುಕೊಟ್ಟರು.
ಅತಿ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆ ಕಾಯ್ದುಕೊಳ್ಳುವ ಮೂಲಕ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಧೋನಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.