ADVERTISEMENT

ಧೋನಿ ಬಳಿಕ ಸಿಎಸ್‌ಕೆಗೆ ಮುಂದಿನ ನಾಯಕ ಯಾರು? ಸೆಹ್ವಾಗ್ ಬಳಿಯಿದೆ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2022, 14:14 IST
Last Updated 14 ಮೇ 2022, 14:14 IST
ಋತುರಾಜ್ ಗಾಯಕವಾಡ್
ಋತುರಾಜ್ ಗಾಯಕವಾಡ್   

ಮುಂಬೈ: ಮಹೇಂದ್ರ ಸಿಂಗ್ ಧೋನಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಯಾರು ಆಗಲಿದ್ದಾರೆ ಎಂಬ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ.

40 ವರ್ಷದ ಧೋನಿ ಐಪಿಎಲ್‌ನಲ್ಲಿ ಮುಂದಿನ ವರ್ಷ ಆಡುತ್ತಾರೆಯೇ ಅಥವಾ ನಾಯಕರಾಗಿ ಮುಂದುವರಿಯುತ್ತಾರೆಯೇ ಎಂಬುದು ತಿಳಿದು ಬಂದಿಲ್ಲ. ಹಾಗಾಗಿ ಹೊಸ ನಾಯಕನ ಹುಡುಕಾಟ ಅನಿವಾರ್ಯವೆನಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್, ಮಹಾರಾಷ್ಟ್ರ ಮೂಲದ ಯುವ ಬ್ಯಾಟರ್ ಋತುರಾಜ್ ಗಾಯಕವಾಡ್, ಧೋನಿ ಅವರ ನಾಯಕ ಸ್ಥಾನವನ್ನು ತುಂಬಬಲ್ಲರು ಎಂದು ತಿಳಿಸಿದ್ದಾರೆ.

'ಅವರು (ಋತುರಾಜ್) ಮಹಾರಾಷ್ಟ್ರ ತಂಡದ ನಾಯಕರಾಗಿದ್ದಾರೆ. ತುಂಬಾ ಶಾಂತಚಿತ್ತವಾಗಿ ಆಡುತ್ತಾರೆ. ಶತಕ ಗಳಿಸಿದರೂ ಅತಿಯಾದ ವರ್ತನೆ ತೋರುವುದಿಲ್ಲ. ಸೊನ್ನೆಗೆ ಔಟ್ ಆದರೂ ಅದೇ ಶೈಲಿ ಕಾಣಸಿಗುತ್ತದೆ' ಎಂದು ಹೇಳಿದ್ದಾರೆ.

'ಉತ್ತಮ ನಾಯಕನಾಗಬೇಕಾದ ಎಲ್ಲ ಗುಣವೂ ಅವರಲ್ಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಯಕರಾಗಿದ್ದರಿಂದ ಪಂದ್ಯವನ್ನು ಹೇಗೆ ನಿಯಂತ್ರಿಸಬೇಕು ಎಂಬ ಕಲ್ಪನೆಯನ್ನು ಹೊಂದಿದ್ದಾರೆ. ಯಾರಿಗೆ ಬೌಲಿಂಗ್ ನೀಡಬೇಕು. ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾರನ್ನು ಬದಲಿಸಬೇಕು ಎಂಬುದರ ಕುರಿತು ಅರಿವಿದೆ' ಎಂದು ಹೇಳಿದರು.

'ಗಾಯಕವಾಡ್ ಇನ್ನೂ ಮೂರು-ನಾಲ್ಕು ವರ್ಷ ಆಡಿದರೆ ಧೋನಿ ಬಳಿಕ ದೀರ್ಘಾವಧಿಯ ನಾಯಕರಾಗಬಲ್ಲರು. ಧೋನಿಯನ್ನು ಏಕೆ ಉತ್ತಮ ನಾಯಕರಾಗಿ ಪರಿಗಣಿಸಲಾಗುತ್ತದೆ? ಏಕೆಂದರೆ ಅವರು ಕೂಲ್ ಆಗಿದ್ದು, ಮೈದಾನದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಬ್ಯಾಟರ್ ಹಾಗೂ ಬೌಲರ್‌ಗಳನ್ನು ಸರಿಯಾಗಿ ಬಳಕೆ ಮಾಡುತ್ತಾರೆ. ಅವರಿಗೆ ಅದೃಷ್ಟದ ಸಾಥ್ ಕೂಡ ಇದೆ' ಎಂದಿದ್ದಾರೆ.

ಧೋನಿ ಧೈರ್ಯಶಾಲಿ ನಾಯಕ. ಅದೃಷ್ಟವನ್ನು ಹೊರತುಪಡಿಸಿ ಧೋನಿಯ ಎಲ್ಲ ಗುಣಗಳನ್ನು ಗಾಯಕವಾಡ್ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಪರ ಮೂರನೇ ವರ್ಷ ಆಡುತ್ತಿರುವ ಗಾಯಕವಾಡ್, 12 ಪಂದ್ಯಗಳಲ್ಲಿ 26.08ರ ಸರಾಸರಿಯಲ್ಲಿ 313 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಒಳಗೊಂಡಿದೆ. ಗರಿಷ್ಠ ಸ್ಕೋರ್ 99 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.