ADVERTISEMENT

IPL 2023: ಬಟ್ಲರ್, ಯಶಸ್ವಿ, ಸಂಜು ಮಿಂಚು: ರಾಜಸ್ಥಾನ ಶುಭಾರಂಭ

ಪಿಟಿಐ
Published 2 ಏಪ್ರಿಲ್ 2023, 16:20 IST
Last Updated 2 ಏಪ್ರಿಲ್ 2023, 16:20 IST
   

ಹೈದರಾಬಾದ್‌: ಸಂಘಟಿತ ಆಟವಾಡಿದ ರಾಜಸ್ಥಾನ ರಾಯಲ್ಸ್ ತಂಡದವರು ಐ‍ಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಗೆಲುವಿನ ಆರಂಭ ಮಾಡಿದರು.

ಇಲ್ಲಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ 72 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪರಾಭವಗೊಳಿಸಿತು.

ಟಾಸ್‌ ಗೆದ್ದ ಹೈದರಾಬಾದ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 203 ರನ್‌ ಗಳಿಸಿತು. ಹೈದರಾಬಾದ್‌ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 131 ರನ್ ಮಾತ್ರ ಗಳಿಸಿತು.

ADVERTISEMENT

ಭರ್ಜರಿ ಜೊತೆಯಾಟ: ರಾಜಸ್ಥಾನ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಜೋಸ್‌ ಬಟ್ಲರ್ (54, 22ಎ, 4X7, 6X3) ಹಾಗೂ ಯಶಸ್ವಿ ಜೈಸ್ವಾಲ್ (54, 37ಎ, 4X9) ಮೊದಲ ವಿಕೆಟ್‌ ಜೊತೆಯಾಟದಲ್ಲಿ ಕೇವಲ 5.5 ಓವರ್‌ನಲ್ಲಿ 85 ರನ್‌ ಗಳಿಸಿದರು. ಬಟ್ಲರ್ ಅವರು ಫಜಲ್‌ಹಕ್ ಫಾರೂಕಿ (41ಕ್ಕೆ 2) ಅವರಿಗೆ ವಿಕೆಟ್‌ ಒಪ್ಪಿಸಿದ, ಬಳಿಕ ನಾಯಕ ಸಂಜು ಸ್ಯಾಮ್ಸನ್‌ (55, 32ಎ, 4X3, 6X4) ಜೊತೆಗೂಡಿದ ಜೈಸ್ವಾಲ್‌ 54 ರನ್‌ ಕಲೆಹಾಕಿದರು.

ಕೊನೆಯಲ್ಲಿ ಶಿಮ್ರಾನ್‌ ಹೆಟ್ಮೆಯರ್ (ಔಟಾಗದೆ 22) ಕಾಣಿಕೆ ನೀಡಿದ್ದರಿಂದ ತಂಡವು 200ರ ಗಡಿ ದಾಟಿತು. ಹೈದರಾಬಾದ್‌ ತಂಡಕ್ಕಾಗಿ ಟಿ.ನಟರಾಜನ್ ಕೂಡ ಎರಡು ವಿಕೆಟ್‌ ಗಳಿಸಿದರು.

ದೊಡ್ಡ ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡಕ್ಕೆ ವೇಗಿ ಟ್ರೆಂಟ್‌ ಬೌಲ್ಟ್‌ (21ಕ್ಕೆ 2) ಆರಂಭದಲ್ಲೇ ಆಘಾತ ನೀಡಿದರು. ಇನಿಂಗ್ಸ್‌ ಮೊದಲ ಓವರ್‌ ಮೇಡನ್‌ ಮಾಡಿದ ಅವರು ಅಭಿಷೇಕ್ ಶರ್ಮಾ ಹಾಗೂ ರಾಹುಲ್ ತ್ರಿಪಾಠಿ ಅವರ ವಿಕೆಟ್‌ ಕಬಳಿಸಿದರು. ಮಯಂಕ್‌ ಅಗರವಾಲ್‌ (27) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಬಳಿಕ ತಂಡವು ಸ್ಪಿನ್ನರ್ ಯಜುವೇಂದ್ರ (17ಕ್ಕೆ 4) ಮೋಡಿಗೆ ಸಿಲುಕಿ 95 ರನ್‌ಗೆ 8 ವಿಕೆಟ್‌ ಕಳೆದುಕೊಂಡಿತು.

ಜಮ್ಮು ಕಾಶ್ಮೀರ ಜೋಡಿ ಅಬ್ದುಲ್ ಸಮದ್‌ (32) ಹಾಗೂ ಉಮ್ರಾನ್ ಮಲಿಕ್‌ (ಔಟಾಗದೆ 19) ಅವರಿಗೆ ಹೈದರಾಬಾದ್‌ ತಂಡದ ಸೋಲನ್ನು ಕೆಲಕಾಲ ಮುಂದೂಡಲು ಮಾತ್ರ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು
ರಾಜಸ್ಥಾನ ರಾಯಲ್ಸ್:
20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 203 (ಯಶಸ್ವಿ ಜೈಸ್ವಾಲ್‌ 54, ಜೋಸ್‌ ಬಟ್ಲರ್ 54, ಸಂಜು ಸ್ಯಾಮ್ಸನ್‌ 55, ಶಿಮ್ರಾನ್ ಹೆಟ್ಮೆಯರ್ ಔಟಾಗದೆ 22; ಫಜಲ್‌ಹಕ್‌ ಫಾರೂಕಿ 41ಕ್ಕೆ 2, ಟಿ.ನಟರಾಜನ್‌ 23ಕ್ಕೆ 2, ಉಮ್ರಾನ್ ಮಲಿಕ್‌ 32ಕ್ಕೆ 1).

ಸನ್‌ರೈಸರ್ಸ್ ಹೈದರಾಬಾದ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 131 (ಮಯಂಕ್ ಅಗರವಾಲ್‌ 27, ಹ್ಯಾರಿ ಬ್ರೂಕ್‌ 13, ಅಬ್ದುಲ್ ಸಮದ್‌ ಔಟಾಗದೆ 32, ಆದಿಲ್ ರಶೀದ್‌ 18, ಉಮ್ರಾನ್ ಮಲಿಕ್ ಔಟಾಗದೆ 19; ಟ್ರೆಂಟ್‌ ಬೌಲ್ಟ್‌ 21ಕ್ಕೆ 2, ಯಜುವೇಂದ್ರ ಚಾಹಲ್ 17ಕ್ಕೆ 4).

ಫಲಿತಾಂಶ: ರಾಜಸ್ಥಾನ ರಾಯಲ್ಸ್‌ಗೆ 72 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.