ADVERTISEMENT

IPL 2023: ಜಯಿಸಲೇಬೇಕಾದ ಒತ್ತಡದಲ್ಲಿ ಬೆಂಗಳೂರು

ಕೊನೆಯ ಎರಡೂ ಪಂದ್ಯಗಳಲ್ಲಿ ಗೆದ್ದರೆ ಪ್ಲೇಆಫ್ ಹಾದಿ ಸುಗಮ; ಸನ್‌ರೈಸರ್ಸ್‌–ರಾಯಲ್ ಚಾಲೆಂಜರ್ಸ್‌ ಹಣಾಹಣಿ

ಪಿಟಿಐ
Published 17 ಮೇ 2023, 13:57 IST
Last Updated 17 ಮೇ 2023, 13:57 IST
ವಿರಾಟ್ ಕೊಹ್ಲಿ ಹಾಗೂ ಫಫ್ ಡುಪ್ಲೆಸಿ
ವಿರಾಟ್ ಕೊಹ್ಲಿ ಹಾಗೂ ಫಫ್ ಡುಪ್ಲೆಸಿ   

ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಎರಡು ಪಂದ್ಯಗಳು ಬಾಕಿ ಉಳಿದಿವೆ. ಪ್ಲೇ ಆಫ್‌ ಪ್ರವೇಶಿಸಲು ಈ ಎರಡೂ ಹಣಾಹಣಿಗಳಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ.

ಈ ಪೈಕಿ ಮೊದಲ ಸವಾಲು ಗುರುವಾರ ಎದುರಾಗಲಿದೆ. ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫಫ್ ಡುಪ್ಲೆಸಿ ಬಳಗವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.  ಆದರೆ ಬೆಂಗಳೂರು ತಂಡವು ನಾಯಕ ಡುಪ್ಲೆಸಿ, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿದೆ.

ಫಫ್‌ (631 ರನ್) ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೂಡ 438 ರನ್‌ಗಳನ್ನು ಕಲೆಹಾಕಿದ್ದಾರೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಅವರು ಮಿಂಚಿಲ್ಲ. ಇದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ಅವರು ಇಲ್ಲಿ ಲಯಕ್ಕೆ ಮರಳುವ ಭರವಸೆ ಇದೆ. ಮ್ಯಾಕ್ಸ್‌ವೆಲ್ ಅವರೂ 384 ರನ್‌ಗಳನ್ನು ಪೇರಿಸಿದ್ದಾರೆ.

ADVERTISEMENT

ಆದರೆ ಮಧ್ಯಮಕ್ರಮಾಂಕದ ಬ್ಯಾಟರ್‌ಗಳು ಇನ್ನೂ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಬೌಲರ್‌ಗಳಲ್ಲಿ ಮೊಹಮ್ಮದ್ ಸಿರಾಜ್, ವೇಯ್ನ್ ಪಾರ್ನೆಲ್  ಮತ್ತು ಬ್ರೇಸ್‌ವೆಲ್ ಮೇಲೆ ನಿರೀಕ್ಷೆ ಇಡಬಹುದು. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 112 ರನ್‌ಗಳಿಂದ ಆರ್‌ಸಿಬಿ ಜಯಿಸಲು ಪಾರ್ನೆಲ್ ಕಾರಣರಾಗಿದ್ದರು. ತನ್ನಲ್ಲಿರುವ ನಿಯಮಿತ ಬಲದೊಂದಿಗೇ ತಂಡವು ಪ್ಲೇ ಆಫ್‌ ಪ್ರವೇಶಿಸಲು ಪ್ರಯತ್ನಿಸಬೇಕಿದೆ.

ಆರ್‌ಸಿಬಿ 12 ಪಂದ್ಯಗಳನ್ನು ಆಡಿದೆ. ಅದರಲ್ಲಿ ಆರು ಜಯಿಸಿ, ಅಷ್ಟೇ ಸಂಖ್ಯೆಯ ಪಂದ್ಯಗಳನ್ನು ಸೋತಿದೆ. ಇದರಿಂದಾಗಿ 12 ಅಂಕಗಳನ್ನು ಗಳಿಸಿದೆ. ಇನ್ನೆರಡು ಪಂದ್ಯಗಳಲ್ಲಿ ಜಯಿಸಿದರೆ, 16 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಲು ಹಾದಿ ಸುಗಮವಾಗಬಹುದು. ಏಕೆಂದರೆ ಈಗಾಗಲೇ 18 ಅಂಕ ಗಳಿಸಿರುವ ಗುಜರಾತ್ ಟೈಟನ್ಸ್‌ ನಾಲ್ಕರ ಘಟ್ಟ ಪ್ರವೇಶಿಸಿದೆ.

ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಲಾ 15 ಅಂಕ ಗಳಿಸಿವೆ. ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 14 ಅಂಕಗಳಿಸಿದೆ. ಈ ಎಲ್ಲ ತಂಡಗಳೂ ತಲಾ 13 ಪಂದ್ಯಗಳಲ್ಲಿ ಆಡಿವೆ. ಒಂದೊಮ್ಮೆ ಆರ್‌ಸಿಬಿಯು ಎರಡರಲ್ಲಿ ಒಂದು ಪಂದ್ಯ ಸೋತರೆ, ಮುಂಬೈ ಇಂಡಿಯನ್ಸ್‌ ತಂಡವು 21ರಂದು ಸನ್‌ರೈಸರ್ಸ್ ಎದುರು ಪರಾಭವಗೊಳ್ಳುವುದನ್ನು ಕಾಯಬೇಕು.

ಏಡನ್ ಮರ್ಕರಂ ನಾಯಕತ್ವದ ಹೈದರಾಬಾದ್ ತಂಡಕ್ಕೆ ಈ ಯಾವ ಒತ್ತಡವೂ ಇಲ್ಲ. ಏಕೆಂದರೆ ತಂಡವು ಈಗಾಗಲೇ ನಾಲ್ಕರ ಘಟ್ಟದ ಹಾದಿಯಿಂದ ಹೊರಬಿದ್ದಿದೆ. ಆದರೆ ಆರ್‌ಸಿಬಿಯ  ಓಟಕ್ಕೆ ಅಡ್ಡಗಾಲು ಹಾಕುವ ಸಾಮರ್ಥ್ಯವನ್ನಂತೂ ಹೊಂದಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.