ADVERTISEMENT

ಐಪಿಎಲ್‌ನಲ್ಲಿ ಕಳಪೆ ಆಟ; ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪಾಂಡ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2024, 14:36 IST
Last Updated 5 ಏಪ್ರಿಲ್ 2024, 14:36 IST
<div class="paragraphs"><p>ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ</p></div>

ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ

   

ಪಿಟಿಐ ಚಿತ್ರ

ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿ ಹ್ಯಾಟ್ರಿಕ್‌ ಸೋಲು ಕಂಡಿರುವ ಹಾರ್ದಿಕ್‌ ಪಾಂಡ್ಯ, ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ ಇಂದು (ಶುಕ್ರವಾರ) ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ADVERTISEMENT

ಪಾಂಡ್ಯ ನೇತೃತ್ವದ ಮುಂಬೈ ಪಡೆ ಈ ಬಾರಿಯ ಐಪಿಎಲ್‌ ಟಿ20 ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದೆ. ಈವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿದ್ದು, ಪಾಯಿಂಟ್‌ ಖಾತೆ ತೆರೆಯಲು ವಿಫಲವಾಗಿದೆ.

ಸ್ವತಃ ಆಲ್‌ರೌಂಡರ್ ಆಗಿರುವ ಹಾರ್ದಿಕ್‌, ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಮೂರೂ ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಅವರು, ಗಳಿಸಿರುವುದು 69 ರನ್ ಮಾತ್ರ. 7 ಓವರ್‌ ಬೌಲಿಂಗ್‌ ಮಾಡಿ, 10.85ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದರೂ, ದಕ್ಕಿರುವುದು 1 ವಿಕೆಟ್‌ ಅಷ್ಟೇ.

ಕಳೆದೆರಡು ಆವೃತ್ತಿಯಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಮುನ್ನಡೆಸಿದ್ದ ಹಾರ್ದಿಕ್‌, ಈ ಆವೃತ್ತಿ ಆರಂಭಕ್ಕೂ ಮುನ್ನ ಮುಂಬೈ ತಂಡ ಸೇರಿದ್ದರು. ಈ ಹಿಂದೆ ಐದು ಸಲ ಕಪ್‌ ಗೆದ್ದುಕೊಟ್ಟಿದ್ದ ರೋಹಿತ್‌ ಶರ್ಮಾ ಅವರನ್ನು ಕೆಳಗಿಳಿಸಿ, ಹಾರ್ದಿಕ್‌ಗೆ ನಾಯಕತ್ವದ ಹೊಣೆ ನೀಡಲಾಗಿದೆ. ಇದು ರೋಹಿತ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಂದ್ಯಗಳು ನಡೆಯುವಾಗಲೇ ಹಾರ್ದಿಕ್‌ ವಿರುದ್ಧ ಘೋಷಣೆಗಳನ್ನು ಕೂಗಿ, ಕಿಡಿಕಾರುತ್ತಿದ್ದಾರೆ.

ಇದರ ನಡುವೆ ಪಾಂಡ್ಯ ಅವರು ಗಿರ್‌ ಸೋಮಾನಾಥ ಜಿಲ್ಲೆಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥಿಸಿದ್ದಾರೆ. ಈ ವಿಡಿಯೊವನ್ನು ದೇವಾಲಯದ ಟ್ರಸ್ಟ್‌ ಹಂಚಿಕೊಂಡಿದೆ.

ಈ ಆವೃತ್ತಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 6 ವಿಕೆಟ್‌ ಅಂತರದಿಂದ ಮುಗ್ಗರಿಸಿದ್ದ ಮುಂಬೈ, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 31 ರನ್ ಅಂತರದಿಂದ ಸೋತ್ತಿತ್ತು. ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್‌ ವಿರುದ್ಧ 6 ವಿಕೆಟ್‌ಗಳಿಂದ ಸೋಲೊಪ್ಪಿಕೊಂಡಿದೆ.

ಏಪ್ರಿಲ್‌ 7ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.