ADVERTISEMENT

IPL 2024 | LSG vs MI: ಲಖನೌಗೆ ಮಣಿದ ಮುಂಬೈ

ಸ್ಟೊಯಿನಿಸ್ ಆಲ್‌ರೌಂಡ್‌ ಆಟ : ಮುಂಬೈಗೆ ಏಳನೇ ಸೋಲು

ಪಿಟಿಐ
Published 30 ಏಪ್ರಿಲ್ 2024, 20:48 IST
Last Updated 30 ಏಪ್ರಿಲ್ 2024, 20:48 IST
<div class="paragraphs"><p>ಲಖನೌ ಬೌಲರ್ ರವಿ ಬಿಷ್ಣೋಯಿ ಸಂಭ್ರಮ</p></div>

ಲಖನೌ ಬೌಲರ್ ರವಿ ಬಿಷ್ಣೋಯಿ ಸಂಭ್ರಮ

   

(ಪಿಟಿಐ ಚಿತ್ರ)

 ಲಖನೌ: ಮಾರ್ಕಸ್‌ ಸ್ಟೊಯಿನಿಸ್‌ (19ಕ್ಕೆ 1 ಮತ್ತು 62, 45ಎ) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. 

ADVERTISEMENT

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ಬೌಲರ್‌ಗಳು ಮುಂಬೈ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 144 ರನ್‌ಗಳಿಗೆ ಕಟ್ಟಿ ಹಾಕಿದರು. ನಂತರ ಲಖನೌ ತಂಡ 19.2 ಓವರ್‌ಗಳಲ್ಲಿ ಆರು ವಿಕಟ್‌ಗೆ 145 ರನ್ ಗಳಿಸಿತು. 

ಲೀಗ್ ನಲ್ಲಿ ಆರನೇ ಗೆಲುವಿನೊಡನೆ ಲಖನೌ ಮೂರನೇ ಸ್ಥಾನಕ್ಕೆ ಜಿಗಿದರೆ, ಮುಂಬೈ ತಂಡ ಏಳನೇ ಸೋಲಿನೊಡನೆ  ಪ್ಲೇ ಆಫ್‌ ಹಾದಿ ತೀವ್ರ ಹಿನ್ನಡೆ ಅನುಭವಿಸಿತು.  

ಲಖನೌ ತಂಡದ ಆರಂಭಿಕ ಆಟಗಾರ  ಅರ್ಶಿನ್ ಕುಲಕರ್ಣಿ ಅವರಿಗೆ ತುಷಾರ್ ಖಾತೆ ತೆರೆಯಲು ಬಿಡಲಿಲ್ಲ. ಕುಲಕರ್ಣಿ ಅವರ ವಿಕೆಟ್‌ ಬೇಗನೆ ಕಳೆದುಕೊಂಡರೂ ನಾಯಕ ಕೆ.ಎಲ್.ರಾಹುಲ್ (28) ಮತ್ತು ಸ್ಟೊಯಿನಿಸ್‌ 53 ರನ್‌ ಜೊತೆಯಾಟದ ಮೂಲಕ ತಂಡಕ್ಕೆ ಒಳ್ಳೆಯ ಬುನಾದಿ ಒದಗಿಸಿದರು. ಸ್ಟೊಯಿನಿಸ್ ನಿರ್ಗಮಿಸಿದಾಗ ತಂಡದ ಮೊತ್ತ 99 ಆಗಿತ್ತು. ಗುರಿ ದೊಡ್ಡದಿರದ ಕಾರಣ ಉಳಿದ ಬ್ಯಾಟರ್‌ಗಳ ಮೇಲೆ ಒತ್ತಡ ಇರಲಿಲ್ಲ. ದೀಪಕ್ ಹೂಡಾ (18) ಮತ್ತು ನಿಕೋಲಸ್ ಪೂರನ್ (14) ತಂಡದ ಗೆಲುವಿಗೆ ಕಾಣಿಕೆ ನೀಡಿದರು. 

ಟಾಸ್ ಗೆದ್ದ ಕೆ.ಎಲ್. ರಾಹುಲ್ ಬಳಗವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪವರ್‌ ಪ್ಲೇ ಅವಧಿಯಲ್ಲಿಯೇ ನಾಲ್ಕು ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ತಂಡವು  ಸಾಧಾರಣ ಮೊತ್ತ ಗಳಿಸಿತು. ನೇಹಲ್ ವಧೇರಾ (46 ರನ್) ಮತ್ತು ಇಶಾನ್ ಕಿಶನ್ (32 ರನ್) ಅವರಿಬ್ಬರೂ ಐದನೇ ವಿಕೆಟ್‌ ಜೊತೆಯಾಟದಲ್ಲಿ 53 ರನ್‌ ರನ್ ಗಳಿಸಿದರು. 

‘ಬರ್ತಡೆ ಬಾಯ್’ ರೋಹಿತ್ ಶರ್ಮಾ ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಮೊಹ್ಸಿನ್‌ ಖಾನ್ ಎಸೆತವನ್ನು ಆಡುವ ಭರದಲ್ಲಿ ಮಾರ್ಕಸ್ ಸ್ಟೋಯಿನಿಸ್‌ಗೆ ಕ್ಯಾಚಿತ್ತರು. ಅವರು 5 ಎಸೆತ ಎದುರಿಸಿ ಒಂದು ಬೌಂಡರಿ ಗಳಿಸಿದರು. ಸೂರ್ಯಕುಮಾರ್ ಯಾದವ್ ಒಂದು ಸಿಕ್ಸರ್‌ ಎತ್ತಿ ಭರ್ಜರಿ ಬ್ಯಾಟಿಂಗ್‌ನ ಮುನ್ಸೂಚನೆ ನೀಡಿದ್ದರು.

ಆದರೆ ಸ್ಟೊಯಿನಿಸ್ ಎಸೆತವು ಸೂರ್ಯ ಕೈಗವಸು ಸವರಿ ಹಿಂದೆ ಹೋಯಿತು. ತಮ್ಮ ಎಡಕ್ಕೆ ಡೈವ್ ಮಾಡಿದ ರಾಹುಲ್ ಅದನ್ನು ವಶಕ್ಕೆ ಪಡೆದರು. ಯುಡಿಆರ್‌ಎಸ್‌ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಮನವಿ ಮಾಡಿ ಸಫಲರಾದರು. 

ಕಳೆದ ಪಂದ್ಯದ ಹೀರೊ ತಿಲಕ್ ವರ್ಮಾ 11 ಎಸೆತದಲ್ಲಿ 7 ರನ್‌ ಗಳಿಸಿದ್ದಾಗ ರವಿ ಬಿಷ್ಣೋಯಿ ಮಾಡಿದ ಚುರುಕಾದ ಫೀಲ್ಡಿಂಗ್‌ನಲ್ಲಿ ರನ್‌ಔಟ್ ಆದರು. ಇದು ತಂಡಕ್ಕೆ ದೊಡ್ಡ ಪೆಟ್ಟು ನೀಡಿತು.

ನಾಯಕ ಹಾರ್ದಿಕ್ ಪಾಂಡ್ಯ ಖಾತೆಯನ್ನೇ ತೆರೆಯದೇ ನವೀನ್ ಉಲ್ ಹಕ್ ಅವರಿಗೆ ವಿಕೆಟ್ ಒಪ್ಪಿಸಿದರು. ಕೇವಲ 27 ರನ್‌ಗಳಿಗೆ ನಾಲ್ವರು ಬ್ಯಾಟರ್‌ಗಳೂ ಡಗ್‌ಔಟ್‌ಗೆ ಮರಳಿದರು. 

ಇದೆಲ್ಲದರ ನಡುವೆಯೂ ಇಶಾನ್ ಕಿಶನ್ ತಾಳ್ಮೆಯಿಂದ ಆಡುತ್ತಿದ್ದರು. 88.89ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್‌ ಗಳಿಸಿದರು. 3 ಬೌಂಡರಿಗಳನ್ನು ಬಾರಿಸಿದರು. ಅವರೊಂದಿಗೆ ಜೊತೆಗೂಡಿದ ವಧೇರಾ ವಿಕೆಟ್ ಪತನಕ್ಕೆ ತಡೆಯೊಡ್ಡಿದರು.

ವಧೇರಾ ಸ್ವಲ್ಪ ದಿಟ್ಟತನ ತೋರಿಸಿದರು. 14ನೇ ಓವರ್‌ನಲ್ಲಿ ಇಶಾನ್ ವಿಕೆಟ್ ಗಳಿಸಿದ ರವಿ ಬಿಷ್ಣೋಯಿ ಜೊತೆಯಾಟವನ್ನು ಮುರಿದರು. ವಧೇರಾ ಅವರೊಂದಿಗೆ ಸೇರಿದ ಟಿಮ್ ಡೇವಿಡ್ (ಔಟಾಗದೆ 35; 18ಎ, 4X3, 6X1) ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.