ವಿರಾಟ್ ಕೊಹ್ಲಿ
(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ/ಹೈದರಾಬಾದ್: ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಭಾನುವಾರ ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳಿದ್ದಾರೆ. ಅವರು ಶೀಘ್ರದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಹೋದ ತಿಂಗಳು ನಡೆದ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅವರು ‘ವೈಯಕ್ತಿಕ ಕಾರಣ‘ಗಳಿಂದಾಗಿ ಆಡಿರಲಿಲ್ಲ. ಈಚೆಗಷ್ಟೇ ಇಂಗ್ಲೆಂಡ್ ಆಸ್ಪತ್ರೆಯಲ್ಲಿ ಕೊಹ್ಲಿಯವರ ಪತ್ನಿ ಅನುಷ್ಕಾ ಶರ್ಮಾ ಅವರು ಗಂಡುಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರಲು ಕೊಹ್ಲಿ ‘ರಜೆ’ ಪಡೆದಿದ್ದರು.
‘ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಕ್ಷಣಗಳು ಇವು. ರೆಡ್ ಕಿಂಗ್ ಐಪಿಎಲ್ ತಾರಾ ಅಭಿಯಾನ ಮುಂದುವರಿಸಲು ಸಿದ್ಧರಾಗಿದ್ದಾರೆ. ಮಾರ್ಚ್ 22ರಂದು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಪಂದ್ಯ ಆಡಲು ಸಜ್ಜಾಗಿದ್ದಾರೆ. ವಿರಾಟ್ ಅವರನ್ನು ಹುರಿದುಂಬಿಸಲು ನೀವು ಸಿದ್ಧರಾಗಿ. ಕಿಂಗ್ಲಿ ಬೀಟ್ಸ್‌ಗಾಗಿ ಸಿದ್ಧರಾಗೋಣ’ ಎಂದು ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಎಕ್ಸ್‌ನಲ್ಲಿ ಸಂದೇಶ ಹಾಕಿದೆ.
ಭಾನುವಾರ ಅವರು ಮುಂಬೈಗೆ ಬಂದಿದ್ದಾರೆ. ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಸಿಬಿ ತರಬೇತಿ ಶಿಬಿರವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಕಳೆದ ಹಲವು ವರ್ಷಗಳಿಂದ ವಿರಾಟ್ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದಾರೆ. ಹೋದ ವರ್ಷದ ಆವೃತ್ತಿಯಲ್ಲಿ ಅವರು 639 ರನ್ ಗಳಿಸಿದ್ದರು.
ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೂ ಮುನ್ನ ಉತ್ತಮ ಲಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಐಪಿಎಲ್ 17ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯವು ಮಾರ್ಚ್ 22ರಂದು ಚೆನ್ನೈಯ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.
ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೊದಲ 17 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಆರ್‌ಸಿಬಿ ಮಾರ್ಚ್ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ 'ಹೋಮ್' ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.