ಚೆನ್ನೈ: ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಾವು ಪ್ರತಿನಿಧಿಸುವ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂಬರುವ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಅವರು ಚೆನ್ನೈ ತಂಡದಲ್ಲಿ ತಮ್ಮ ಭವಿಷ್ಯದ ಪಾತ್ರದ ಕುರಿತು ಚರ್ಚಿಸಿದರೆಂದು ಮೂಲಗಳು ಹೇಳಿವೆ.
ಐಪಿಎಲ್ ತಂಡಗಳಿಗೆ ತಾವು ಉಳಿಸಿಕೊಳ್ಳಲಿರುವ ಆಟಗಾರರ (ರಿಟೇನ್) ಕುರಿತು ಸ್ಪಷ್ಟಪಡಿಸುವ ಪ್ರಕ್ರಿಯೆ ಆರಂಭವಾಗಲು ಇನ್ನೂ ಎರಡು ತಿಂಗಳುಗಳು ಬಾಕಿ ಇವೆ.
‘ಭವಿಷ್ಯದಲ್ಲಿ ಆಟಗಾರರ ಪಾತ್ರ ಕುರಿತು ನಿರ್ಧರಿಸಲು ಇನ್ನೂ ಬಹಳಷ್ಟು ಕಾಲಾವಕಾಶ ಇದೆ. ರಿಟೆನ್ಷನ್ ದಿನಾಂಕಗಳನ್ನು ಇನ್ನೂ ಪ್ರಕಟಿಸಬೇಕಿದೆ. ಆದ್ದರಿಂದ ಸಾಕಷ್ಟು ಸಮಯ ಇದೆ. ಆಟಗಾರರ ಬಿಡ್ ಪ್ರಕ್ರಿಯೆ ಪೂರ್ವಭಾವಿಯಾಗಿ ಅಶ್ವಿನ್ ಮತ್ತು ಆಟಗಾರರೊಂದಿಗೆ ಮಾತನಾಡಲಾಯಿತು. ಅನುಭವಿ ಆಟಗಾರರಾಗಿರುವ ಅಶ್ವಿನ್ ಕುರಿತು ಕೆಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಪ್ರಮುಖವಾಗಿ ಮುಂದಿನ ಐಪಿಎಲ್‌ನಲ್ಲಿ ಅವರ ಪಾತ್ರ ಮತ್ತು ಹೊಣೆಗಾರಿಕೆಗಳ ಬಗ್ಗೆ ಮಾತನಾಡಲಾಯಿತು’ ಎಮದು ಫ್ರ್ಯಾಂಚೈಸಿಯ ಮೂಲಗಳು ತಿಳಿಸಿವೆ.
ಹೋದ ವರ್ಷ ಅಶ್ವಿನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಮೆಗಾ ಹರಾಜಿನಲ್ಲಿ ಅವರನ್ನು ಚೆನ್ನೈ ತಂಡವು ₹ 9.75 ಕೋಟಿಗೆ ಖರೀದಿಸಿತ್ತು. 2025 ಆವೃತ್ತಿಯಲ್ಲಿ ಅವರು ಆಡಿದ್ದರು. 2009ರಿಂದ 2015ರವರೆಗೆ ಅವರು ಚೆನ್ನೈ ನಲ್ಲಿ ಆಡಿದ್ದರು. ಅವರಿಗೆ ಇದು ತವರಿನ ತಂಡವೂ ಹೌದು.
ಸ್ಪಾಟ್ ಫಿಕ್ಸಿಂಗ್ ಪ್ರಕರಣದದಲ್ಲಿ ಚೆನ್ನೈ ತಂಡವು ಎರಡು ವರ್ಷ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅಶ್ವಿನ್ ಅವರು ಪುಣೆಯ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ಆಡಿದ್ದರು.
ಕಳೆದ ಆವೃತ್ತಿಯಲ್ಲಿ ಅವರು 9 ಪಂದ್ಯಗಳಲ್ಲಿ ಆಡಿದ್ದರು. ಕೇವಲ ಏಳು ವಿಕೆಟ್ ಗಳಿಸಿದ್ದರು. ತಂಡಕ್ಕೂ ಇದು ನಿರಾಶೆಯ ಆವೃತ್ತಿಯಾಗಿತ್ತು. ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿತ್ತು.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವ ವಿಕೆಟ್‌ಕೀಪರ್ –ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಚೆನ್ನೈ ತಂಡಕ್ಕೆ ಸೇರಲಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ.
‘ಕೆಲವು ಆಟಗಾರರನ್ನು ನಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಯೋಚನೆ ಇದೆ. ಆದರೆ ಇದುವರೆಗೂ ಯಾವುದೇ ಆಟಗಾರನೊಂದಿಗೆ ನಾವು ಮಾತುಕತೆ ಮಾಡಿಲ್ಲ’ ಎಂದುಚೆನ್ನೈ ಫ್ರ್ಯಾಂಚೈಸಿ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.