ADVERTISEMENT

IPL 2025 | ಚೆನ್ನೈಗೆ ಮತ್ತೆ ಸೋಲು: ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ರಾಜಸ್ಥಾನ

ಪಿಟಿಐ
Published 20 ಮೇ 2025, 18:09 IST
Last Updated 20 ಮೇ 2025, 18:09 IST
<div class="paragraphs"><p>ರಾಜಸ್ಥಾನ ರಾಯಲ್ಸ್‌ ಬ್ಯಾಟರ್‌ ಶಿಮ್ರೋನ್‌ ಹೆಟ್ಮೆಯರ್‌ಗೆ ಚೆನ್ನೈ ತಂಡದ ಎಂ.ಎಸ್‌.ಧೋನಿ ಹಾಗೂ ಮತೀಷ ಪಥಿರಾಣ ಅಭಿನಂದನೆ</p></div>

ರಾಜಸ್ಥಾನ ರಾಯಲ್ಸ್‌ ಬ್ಯಾಟರ್‌ ಶಿಮ್ರೋನ್‌ ಹೆಟ್ಮೆಯರ್‌ಗೆ ಚೆನ್ನೈ ತಂಡದ ಎಂ.ಎಸ್‌.ಧೋನಿ ಹಾಗೂ ಮತೀಷ ಪಥಿರಾಣ ಅಭಿನಂದನೆ

   

ರಾಯಿಟರ್ಸ್‌ ಚಿತ್ರ

ನವದೆಹಲಿ: ಆಕಾಶ್ ಮಧ್ವಾಲ್‌ (29ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ಬಳಿಕ ಎಡಗೈ ಬ್ಯಾಟರ್‌, 14ರ ಪೋರ ವೈಭವ್‌ ಸೂರ್ಯವಂಶಿ (57; 33ಎ, 4x4, 6x4) ಅವರ ಬಿರುಸಿನ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತು.

ADVERTISEMENT

ಈ ಪಂದ್ಯವು ಪ್ಲೇ ಆಫ್‌ ದೃಷ್ಟಿಯಿಂದ ಮಹತ್ವ ಹೊಂದಿರಲಿಲ್ಲ. ಆದರೆ, ಅಂಕಪಟ್ಟಿಯಲ್ಲಿ ತಳದಲ್ಲಿರುವ ತಂಡಗಳು ಕೊನೆಯ ಸ್ಥಾನವನ್ನು ತಪ್ಪಿಸಲು ನಡೆದ ಹೋರಾಟದಲ್ಲಿ ರಾಜಸ್ಥಾನ ಮೇಲುಗೈ ಸಾಧಿಸಿತು. ಹ್ಯಾಟ್ರಿಕ್‌ ಸೋಲು ಕಂಡಿದ್ದ ರಾಜಸ್ಥಾನ ತಂಡ ಈ ಗೆಲುವಿನೊಂದಿಗೆ ಐ‍ಪಿಎಲ್‌ ಹಾಲಿ ಆವೃತ್ತಿಯ ಅಭಿಯಾನವನ್ನು ಮುಗಿಸಿತು.

ಸಂಜು ಸ್ಯಾಮ್ಸನ್‌ ಬಳಗವು ಒಟ್ಟು 14 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು, ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಮುಂದುವರಿಯಿತು. ಚೆನ್ನೈ ತಂಡಕ್ಕೆ ಇನ್ನೊಂದು ಪಂದ್ಯ ಬಾಕಿಯಿದ್ದು, ಆರು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿ ಉಳಿಯಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 187 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡವು 17 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ಗೆ 188 ರನ್‌ ಗಳಿಸಿ ಗೆಲುವಿನ ನಗೆಬೀರಿತು.

ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್‌ (36;19ಎ) ಮತ್ತು ಸೂರ್ಯವಂಶಿ ಮೊದಲ ವಿಕೆಟ್‌ಗೆ 37 (22ಎಸೆತ) ರನ್‌ ಸೇರಿಸಿದರು. ಜೈಸ್ವಾಲ್‌ ನಿರ್ಗಮಿಸಿದ ಬಳಿಕ ಸೂರ್ಯವಂಶಿ ಅವರನ್ನು ಸೇರಿಕೊಂಡ ಸಂಜು (41;31ಎ, 4x3, 6x2) ಎಚ್ಚರಿಕೆಯ ಆಟವಾಡಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಅವರಿಬ್ಬರು 98 (59ಎ) ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಂತರ ರಿಯಾನ್‌ ಪರಾಗ್ (3) ನಿರಾಸೆ ಮೂಡಿಸಿದರೂ ಧ್ರುವ ಜುರೇಲ್‌ (ಔಟಾಗದೇ 31;12ಎ, 4x2, 6x3) ಮತ್ತು ಶಿಮ್ರಾನ್‌ ಹೆಟ್ಮೆಯರ್‌ (ಔಟಾಗದೇ 12) ಕೊನೆಯಲ್ಲಿ ಅಬ್ಬರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಯುಷ್‌, ಬ್ರೆವಿಸ್ ಆಸರೆ: ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ (43;20ಎ, 4x8, 6x1) ಮತ್ತು ಡಿವಾಲ್ಡ್ ಬ್ರೆವಿಸ್ (42;25ಎ, 4x3, 6x3) ಅವರ ಬ್ಯಾಟಿಂಗ್‌ ನೆರವಿನಿಂದ ಚೆನ್ನೈ ತಂಡ ಹೋರಾಟದ ಮೊತ್ತ ಗಳಿಸಿತು.

ರಾಯಲ್ಸ್‌ ತಂಡದ ಯುಧವೀರ್ ಸಿಂಗ್ ಅವರು ಹಾಕಿದ ಎರಡನೇ ಓವರ್‌ನಲ್ಲಿ ಡೆವೊನ್ ಕಾನ್ವೆ ಮತ್ತು ಊರ್ವಿಲ್ ಪಟೇಲ್ ಅವರು ಔಟಾದರು. ಆಗ ತಂಡದ ಮೊತ್ತ 12 ರನ್‌ ಆಗಿತ್ತು. ಈ ಹಂತದಲ್ಲಿ ಆಯುಷ್ ಅವರು ಬೀಸಾಟವಾಡಿದರು. ಅದರಿಂದಾಗಿ ಪವರ್‌ಪ್ಲೇ ಹಂತದಲ್ಲಿ ತಂಡವು 68 ರನ್‌ ಗಳಿಸಲು ಸಾಧ್ಯವಾಯಿತು. ಆರನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಅವರು ಆಯುಷ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು.

ಒಂದು ಹಂತದಲ್ಲಿ 78 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಯಿತು. ಈ ಹಂತದಲ್ಲಿ ಜೊತೆಗೂಡಿದ ಬ್ರೆವಿಸ್ ಮತ್ತು ಶಿವಂ ದುಬೆ (39; 32ಎ, 4X2, 6X2) ಅವರು ತಂಡದ ಆತಂಕ ದೂರ ಮಾಡಿದರು. 6ನೇ ವಿಕೆಟ್ ಜೊತೆಯಾಟದಲ್ಲಿ 59 ರನ್ ಸೇರಿಸಿ ಚೇತರಿಕೆ ನೀಡಿದರು.  ಬ್ರೆವಿಸ್ ಔಟಾದ ನಂತರ ದುಬೆ ತಮ್ಮ ಆಟದ ವೇಗ ಹೆಚ್ಚಿಸಿದರು. ಆಕಾಶ್ ಮಧ್ವಾಲ್ ಅವರು ಹಾಕಿದ ಕೊನೆಯ ಓವರ್‌ನಲ್ಲಿ ಶಿವಂ ಮತ್ತು ಧೋನಿ ಇಬ್ಬರೂ ಔಟಾದರು. 

ಸಂಕ್ಷಿಪ್ತ ಸ್ಕೋರು

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 8ಕ್ಕೆ187 (ಆಯುಷ್ ಮ್ಹಾತ್ರೆ 43, ಡಿವಾಲ್ಡ್ ಬ್ರೆವಿಸ್ 42, ಯುಧವೀರ್ ಸಿಂಗ್ ಚರಕ್ 47ಕ್ಕೆ3, ಆಕಾಶ್ ಮಧ್ವಾಲ್ 29ಕ್ಕೆ3).

ರಾಜಸ್ಥಾನ ರಾಯಲ್ಸ್‌: 17.1 ಓವರ್‌ಗಳಲ್ಲಿ 4ಕ್ಕೆ 188 (ಯಶಸ್ವಿ ಜೈಸ್ವಾಲ್‌ 36, ವೈಭವ್‌ ಸೂರ್ಯವಂಶಿ 57, ಸಂಜು ಸ್ಯಾಮ್ಸನ್‌ 41, ಧ್ರುವ ಜುರೇಲ್‌ ಔಟಾಗದೇ 31; ರವಿಚಂದ್ರನ್‌ ಅಶ್ವಿನ್‌ 41ಕ್ಕೆ 2).

ಪಂದ್ಯದ ಆಟಗಾರ: ಆಕಾಶ್ ಮಧ್ವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.