ನವದೆಹಲಿ: ಹೋದ ವಾರದ ಮಧ್ಯದಲ್ಲಿ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಪಂಜಾಬ್ ಕಿಂಗ್ಸ್ ವಿರುದ್ಧ ಆಡುವಾಗ ಪಂದ್ಯ ಅರ್ಧದಲ್ಲೇ ‘ಬ್ಲ್ಯಾಕ್‌ಔಟ್’ ಆಗಿ ಸ್ಥಗಿತಗೊಂಡಿತ್ತು. ಆದರೆ ಅದಕ್ಕೆ ಮೊದಲಿನ ಕೆಲವು ಪಂದ್ಯಗಳಿಂದಲೇ ಪರದಾಡುತ್ತಿರುವ ಡೆಲ್ಲಿ ತಂಡವು ಭಾನುವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು ಪ್ಲೇ ಆಫ್ ಆಸೆಗೆ ಜೀವ ನೀಡುವ ವಿಶ್ವಾಸದಲ್ಲಿದೆ.
ಲೀಗ್ ಪುನರಾರಂಭ ಆದರೂ ಡೆಲ್ಲಿ ತಂಡದ ಕೆಲವು ಆಟಗಾರರು ಬಂದಿಲ್ಲ. ಅಕ್ಷರ್ ಪಟೇಲ್ ನೇತೃತ್ವದ ತಂಡ 11 ಪಂದ್ಯಗಳಿಂದ 13 ಅಂಕ ಪಡೆದಿದೆ. ಕೊನೆಯ ಐದು ಪಂದ್ಯಗಳಲ್ಲಿ ಮೂರು ಸೋತಿದೆ. ಒಂದು ಮಳೆಯ ಪಾಲಾಗಿತ್ತು. ಈಗ ಪ್ರಮುಖ ವೇಗದ ಬೌಲಿಂಗ್ ಅಸ್ತ್ರ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅಲಭ್ಯರಾಗಿರುವುದು ತಂಡಕ್ಕೆ ಚಿಂತೆ ಮೂಡಿಸಿದೆ. ಅವರ ಬದಲು ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರಹಮಾನ್ ತಂಡ ಸೇರಿಕೊಂಡಿದ್ದಾರೆ. ಅವರು ಐಪಿಎಲ್‌ನ ಅನುಭವಿ ಬೌಲರ್ ಆಗಿದ್ದು 7.84ರ ಇಕಾನಮಿಯಲ್ಲಿ 38 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಬಾರಿ ಡೆಲ್ಲಿ ತಂಡದ ಸಾಧನೆ ಕಳಪೆಯಾಗಿದೆ. ಕೇವಲ ಒಂದೇ ಗೆಲುವು ಪಡೆದಿದೆ. ಅದೂ ಸೂಪರ್ ಓವರ್‌ನಲ್ಲಿ. ತಂಡದ ಬೌಲಿಂಗ್ ಪರಿಣಾಮಕಾರಿಯಾಗಿಲ್ಲ. ವೇಗದ ಬೌಲರ್‌ಗಳಾದ ದುಷ್ಮಂತ ಚಮೀರ ಮತ್ತು ಮುಕೇಶ್ ಕುಮಾರ್ ಪರದಾಡುತ್ತಿದ್ದಾರೆ. ಹೀಗಾಗಿ ಮುಸ್ತಫಿಝುರ್ ಪಾತ್ರ ಪ್ರಮುಖವಾಗಲಿದೆ.
ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ಬರಬೇಕಾಗಿದೆ. ಮೊದಲ ಪಂದ್ಯದಲ್ಲಿ ಮಿಂಚಿದ ನಂತರ ಕರುಣ್ ನಾಯರ್ ನಂತರ ಸ್ಥಿರ ಪ್ರದರ್ಶನ ನೀಡಿಲ್ಲ. ಡುಪ್ಲೆಸಿ, ಅಭಿಷೇಕ್ ಪೊರೆಲ್ ಉತ್ತಮ ಆರಂಭದ ಲಾಭ ಪಡೆಯುತ್ತಿಲ್ಲ. ಹೀಗಾಗಿ ಅನುಭವಿ ಕೆ.ಎಲ್.ರಾಹುಲ್ ಅವರ ಮೇಲೆ ಹೆಚ್ಚಿನ ಹೊಣೆಯಿದೆ.
ಇನ್ನೊಂದೆಡೆ, ಬಟ್ಲರ್ ಮತ್ತು ರಬಾಡ ಅವರು ಮರಳಿರುವ ಕಾರಣ ಗುಜರಾತ್ ಉತ್ಸಾಹದಿಂದ ಇದೆ. ಶುಭಮನ್ ಗಿಲ್, ಬಿ.ಸಾಯಿ ಸುದರ್ಶನ್, ಬಟ್ಲರ್ ಅವರು ತಂಡದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿದ್ದಾರೆ.
ಬೌಲಿಂಗ್‌ನಲ್ಲಿ ಪ್ರಸಿದ್ಧ ಕೃಷ್ಣ (20 ವಿಕೆಟ್) ಲೀಗ್‌ನ ಯಶಸ್ವಿ ಬೌಲರ್ ಎನಿಸಿದ್ದಾರೆ. ಮೊಹಮ್ಮದ್ ಸಿರಾಜ್, ಎಡಗೈ ಸ್ಪಿನ್ನರ್ ಸಾಯಿಕಿಶೋರ್ ಅವರೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.