ಅಶುತೋಷ್ ಶರ್ಮಾ
(ಪಿಟಿಐ ಚಿತ್ರ)
ವಿಶಾಖಪಟ್ಟಣ: ಕೆಳ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಆಟವಾಡಿದ ಅಶುತೋಷ್ ಶರ್ಮಾ (ಔಟಾಗದೇ 66; 31ಎ, 4x5, 6x5) ಅವರು ಲಖನೌ ಸೂಪರ್ ಜೈಂಟ್ಸ್ ತಂಡದಿಂದ ಜಯವನ್ನು ಕಸಿದುಕೊಂಡರು. ಗೆಲುವಿನ ತೂಗುಯ್ಯಾಲೆ ಕಂಡ ಪಂದ್ಯದಲ್ಲಿ ಮೂರು ಎಸೆತಗಳು ಬಾಕಿ ಇರುವಂತೆ ಡೆಲ್ಲಿ ತಂಡವು ಒಂದು ವಿಕೆಟ್‌ನ ರೋಜಕ ಜಯ ಪಡೆದು ಐಪಿಎಲ್‌ನಲ್ಲಿ ಶುಭಾರಂಭ ಮಾಡಿತು.
ರನ್‌ಗಳ ಪ್ರವಾಹ ಕಂಡ ಪಂದ್ಯದಲ್ಲಿ ಸೋಮವಾರ ಮೊದಲು ಆಡಿದ ಲಖನೌ ತಂಡವು ಆರಂಭ ಆಟಗಾರ ಮಿಚೆಲ್ ಮಾರ್ಷ್ (72, 36ಎ, 4x6, 6x6) ಮತ್ತು ನಿಕೋಲಸ್ ಪೂರನ್ (75, 30ಎ, 4x6, 6x7) ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ 8 ವಿಕೆಟ್‌ಗೆ 209 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಿಂದಲೇ ಆಘಾತ ಅನುಭವಿಸಿತು. 65 ರನ್‌ಗಳಿಗೆ ಅರ್ಧದಷ್ಟು ಆಟಗಾರರು ಪೆವಿಲಿಯನ್ ಸೇರಿಸಿದ್ದರು. ಟ್ರಿಸ್ಟನ್ ಸ್ಟಬ್ಸ್ (34;22ಎ) ನಿರ್ಗಮಿಸಿದಾಗ ತಂಡದ ಮೊತ್ತ ಆರು ವಿಕೆಟ್‌ಗೆ 113. ಸೋಲಿನ ಭೀತಿಯಲ್ಲಿದ್ದ ತಂಡಕ್ಕೆ ಅಶುತೋಷ್ ಆಪತ್ಬಾಂಧವನಾದರು.
ಏಳನೇ ವಿಕೆಟ್‌ಗೆ ವಿಪ್ರಜ್ ನಿಗಂ (39;15ಎ, 4x5, 6x2) ಅವರೊಂದಿಗೆ 55 ರನ್‌ಗಳ (22ಎ) ಜೊತೆಯಾಟ ಪಂದ್ಯಕ್ಕೆ ತಿರುವು ನೀಡಿತು. ನಂತರ ಮಿಚೆಲ್ ಸ್ಟಾರ್ಕ್ ಮತ್ತು ಕುಲದೀಪ್ ಯಾದವ್ ಅಲ್ಪಮೊತ್ತಕ್ಕೆ ನಿರ್ಗಮಿಸಿದಾಗ ಪಂದ್ಯ ರೋಚಕ ಘಟ್ಟ ತಲುಪಿತು. ಆದರೆ, ಅಶುತೋಷ್ ಅವರು ಮೋಹಿತ್ ಶರ್ಮಾ ನೆರವಿನಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಶಾಬಾಜ್ ಅಹಮ್ಮದ್ ಮಾಡಿದ ಕೊನೆಯ ಓವರಿನ ಮೂರನೇ ಎಸೆತನ್ನು ಸೈಟ್ ಸ್ಕ್ರೀನ್ ಕಡೆ ಸಿಕ್ಸರ್ ಎತ್ತಿದ ಅಶುತೋಷ್ ಸಂಭ್ರಮಿಸಿದರೆ, ಲಖನೌ ತಂಡದ ನಾಯಕ ರಿಷಭ್ ಪಂತ್ ಅಸಹಾಯಕನಾಗಿದ್ದರು.
ಇದಕ್ಕೆ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಲಖನೌ ತಂಡಕ್ಕೆ ಮಿಚೆಲ್ ಮತ್ತು ನಿಕೋಲಸ್ ಮಿಂಚಿನ ಆರಂಭ ದೊರಕಿಸಿಕೊಟ್ಟರು. 8.1 ಓವರುಗಳಲ್ಲೇ ಮೊತ್ತ ನೂರು ದಾಟಿತ್ತು. ಆದರೆ, ಲಖನೌ ನಾಗಾಲೋಟಕ್ಕೆ ಕೊನೆಯ ಹಂತದ ಓವರುಗಳಲ್ಲಿ ಕಡಿವಾಣ ಹಾಕುವಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ಯಶಸ್ವಿಯಾದರು.
12 ಓವರುಗಳಲ್ಲಿ 1 ವಿಕೆಟ್‌ಗೆ 133 ರನ್ ಗಳಿಸಿ ಅಬ್ಬರಿಸಿದ ಲಖನೌ ಅಂತಿಮವಾಗಿ ನಿರೀಕ್ಷಿತ ಮೊತ್ತ ತಲುಪಲಾಗಲಿಲ್ಲ. ಕೊನೆಯ ಎಂಟು ಓವರುಗಳಲ್ಲಿ 76 ರನ್‌ಗಳನ್ನಷ್ಟೇ ಸೇರಿಸಲು ಶಕ್ತವಾಯಿತು. ಆ ಹಾದಿಯಲ್ಲಿ ಆರು ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಮಧ್ಯಮ ಹಂತದಲ್ಲಿ ಅನುಭವಿ ಸ್ಪಿನ್ನರ್ ಕುಲದೀಪ್ ಯಾದವ್ (4–0–20–2) ಎದುರಾಳಿ ತಂಡಕ್ಕೆ ಲಗಾಮು ತೊಡಿಸಿದರು. ಅವರಿಗೆ ಮಿಚೆಲ್ ಸ್ಟಾರ್ಕ್ (42ಕ್ಕೆ3) ಬೆಂಬಲ ನೀಡಿದ್ದರಿಂದ ಎದುರಾಳಿಗಳ ವೇಗ ಗಮನಾರ್ಹವಾಗಿ ತಗ್ಗಿತು. ರಿಷಭ್ ಪಂತ್ ಖಾತೆ ತೆರೆಯುವ ಮೊದಲೇ ನಿರ್ಗಮಿಸಿ ನಿರಾಸೆ ಮೂಡಿಸಿದರು. ಕೀಪಿಂಗ್‌ನಲ್ಲೂ ನಿರ್ಣಾಯಕ ಸಂದರ್ಭದಲ್ಲೂ ಎಡವಿದರು.
ಅಶುತೋಷ್ ಶರ್ಮಾ
ಸಂಕ್ಷಿಪ್ತ ಸ್ಕೋರು:
ಲಖನೌ ಸೂಪರ್ ಜೈಂಟ್ಸ್: 20 ಓವರುಗಳಲ್ಲಿ 8ಕ್ಕೆ 209 (ಮಿಚೆಲ್ ಮಾರ್ಷ್ 72, ನಿಕೋಲಸ್ ಪೂರನ್ 75, ಡೇವಿಡ್ ಮಿಲ್ಲರ್ ಔಟಾಗದೇ 27; ಮಿಚೆಲ್ ಸ್ಟಾರ್ಕ್ 42ಕ್ಕೆ3, ಕುಲದೀಪ್ ಯಾದವ್ 20ಕ್ಕೆ2).
ಡೆಲ್ಲಿ ಕ್ಯಾಪಿಟಲ್ಸ್: 19.3 ಓವರ್‌ಗಳಲ್ಲಿ 9ಕ್ಕೆ 211 (ಫಾಫ್ ಡು ಪ್ಲೆಸಿ 29, ಅಕ್ಷರ್ ಪಟೇಲ್ 22, ಟ್ರಿಸ್ಟನ್ ಸ್ಟಬ್ಸ್ 34, ಅಶುತೋಷ್ ಶರ್ಮಾ ಔಟಾಗದೇ 66, ವಿಪ್ರಜ್ ನಿಗಂ 39; ಶಾರ್ದೂಲ್ ಠಾಕೂರ್ 19ಕ್ಕೆ 2, ಎಂ.ಸಿದ್ಧಾರ್ಥ್ 39ಕ್ಕೆ 2, ದಿಗ್ವೇಶ್ ರಾಥಿ 31ಕ್ಕೆ 2, ರವಿ ಬಿಷ್ಣೋಯಿ 53ಕ್ಕೆ 2).
ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 1 ವಿಕೆಟ್ ಜಯ.
ಪಂದ್ಯದ ಆಟಗಾರ: ಅಶುತೋಷ್ ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.