ADVERTISEMENT

IPL 2025 Final | RCB vs PBKS: ಐಪಿಎಲ್ ಸಿಂಹಾಸನದ ಮೇಲೆ ಆರ್‌ಸಿಬಿ ಕಣ್ಣು

18 ವರ್ಷದ ಕನಸು ನನಸಾಗುವ ನಿರೀಕ್ಷೆಯಲ್ಲಿ ‘ಬೆಂಗಳೂರು: ಚಾಂಪಿಯನ್ ಪಟ್ಟದ ಮೆಲೆ ಕಿಂಗ್ಸ್‌ ಚಿತ್ತ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
<div class="paragraphs"><p>ಶ್ರೇಯಸ್ ಅಯ್ಯರ್, ರಜತ್ ಪಾಟೀದಾರ್</p></div>

ಶ್ರೇಯಸ್ ಅಯ್ಯರ್, ರಜತ್ ಪಾಟೀದಾರ್

   

(ಚಿತ್ರ ಕೃಪೆ: X/@IPL)

ಅಹಮದಾಬಾದ್: ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಬಾರಿ ತಲುಪಿರುವ ಐಪಿಎಲ್ ಫೈನಲ್ ಅದೃಷ್ಟದ ಫಲ ನೀಡುವ ನಿರೀಕ್ಷೆ ಗರಿಗೆದರಿದೆ. ಹದಿನೆಂಟು ವರ್ಷಗಳಿಂದ ಅನುಭವಿಸಿರುವ ಹತಾಶೆಯನ್ನು ತೊಡೆದುಹಾಕಿ ಸಂಭ್ರಮಿಸುವ ಕಾಲ ಸಮೀಪಿಸಿದೆ. 

ADVERTISEMENT

ಮಂಗಳವಾರ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿಯು ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ವರ್ಷದ ಟೂರ್ನಿಯುದ್ದಕ್ಕೂ ತುಂಬು ಚೈತನ್ಯದ ಆಟವಾಡುತ್ತ ಫೈನಲ್‌ ಹಂತಕ್ಕೆ ಏರಿರುವ ಉಭಯ ತಂಡಗಳಲ್ಲಿ ಯಾರೇ ಗೆದ್ದರೂ ಮೊದಲ ಬಾರಿ ಚಾಂಪಿಯನ್ ಆಗುತ್ತಾರೆ. ಪಂಜಾಬ್ ತಂಡಕ್ಕೂ 18 ವರ್ಷಗಳಿಂದ ಪ್ರಶಸ್ತಿ ಕನಸು ನನಸಾಗಿಲ್ಲ. 

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಪ್ರಶಸ್ತಿ ಗೆದ್ದು ದಾಖಲೆ ಹಂಚಿಕೊಂಡಿವೆ. ಕೋಲ್ಕತ್ತ ನೈಟ್ ರೈಡರ್ಸ್ ಮೂರು ಸಲ ಚಾಂಪಿಯನ್ ಆಗಿದೆ.  ಫ್ರ್ಯಾಂಚೈಸಿ ಲೀಗ್‌ನಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿರುವ ಆರ್‌ಸಿಬಿಯು ಇದುವರೆಗೆ 9 ಸಲ ಪ್ಲೇ ಆಫ್‌ ಪ್ರವೇಶಿಸಿದೆ. ಅದರಲ್ಲಿ ಮೂರು ಬಾರಿ (2009,2011 ಮತ್ತು 2016) ರನ್ನರ್ಸ್ ಅಪ್ ಆಗಿದೆ.

ಚಾಂಪಿಯನ್ ಆಗದಿದ್ದರೂ ತಂಡದ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.  ಐಪಿಎಲ್‌ನ  ಆರಂಭಿಕ ಆವೃತ್ತಿಯಿಂದ ಇಲ್ಲಿಯವರೆಗೂ ಕೊಹ್ಲಿ ಆರ್‌ಸಿಬಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಐಪಿಎಲ್ ತಂಡ ಇದಾಗಿದೆ. ಅಷ್ಟೇ ಅಲ್ಲ; ಪಂದ್ಯ ನಡೆಯುವ ಕ್ರೀಡಾಂಗಣದಲ್ಲಿಯೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆಯೇ ಹೆಚ್ಚು. ತಂಡದ ಆಟಗಾರರು ಪಯಣಿಸುವ ದಾರಿಗಳಲ್ಲಿಯೂ ಅಭಿಮಾನದ ಹೊಳೆ ಹರಿಯುತ್ತದೆ. ಇದಕ್ಕಾಗಿ ಕಾರಣರಾಗಿರುವ ವಿರಾಟ್ ಕೊಹ್ಲಿ ಅವರು ಅಭಿನಂದನಾರ್ಹರು.  ಈ ಸಲದ ಐಪಿಎಲ್‌ನಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡ ಆರ್‌ಸಿಬಿ ಎಂಬುದು ನಿಸ್ಸಂಶಯ. ಬಳಗದಲ್ಲಿರುವ ಪ್ರತಿಯೊಬ್ಬರಿಗೂ ಚಾಂಪಿಯನ್ ಎನಿಸಿಕೊಳ್ಳಬೇಕು ಎಂಬ ತವಕ ಇರುವುದೂ ಸುಸ್ಪಷ್ಟ. ಅದರಲ್ಲೂ ದಿಗ್ಗಜ ಕೊಹ್ಲಿ ಕೂಡ ಇದ್ದಾರೆ.   

ಈ ಸಲದ ಟೂರ್ನಿಯಲ್ಲಿ ಆರ್‌ಸಿಬಿಯ ಲೆಕ್ಕಾಚಾರಗಳಲ್ಲಿ ಬಹುತೇಕ ಎಲ್ಲವೂ ಕೈಗೂಡಿವೆ. ಆದ್ದರಿಂದ ಕಪ್ ಗೆಲ್ಲುವ ನಿರೀಕ್ಷೆಯೂ ಹೆಚ್ಚಿದೆ. ಈ ಋತುವಿನಲ್ಲಿ ಆರ್‌ಸಿಬಿಯು ಒಂದು ತಂಡವಾಗಿ ಅಮೋಘ ಸಾಧನೆ ಮಾಡಿದೆ. 

ವಿರಾಟ್ ಒಟ್ಟು 614 ರನ್‌ ಗಳಿಸಿದ್ದಾರೆ. ಫಿಲ್ ಸಾಲ್ಟ್ (387 ರನ್) ಮತ್ತು ತಂಡಕ್ಕೆ ಈ ವರ್ಷವಷ್ಟೇ ನಾಯಕನಾಗಿ ನೇಮಕರಾದ ರಜತ್ ಪಾಟೀದಾರ್ (286), ‘ಫಿನಿಷರ್’ ಜಿತೇಶ್ ಶರ್ಮಾ (237), ಆಲ್‌ರೌಂಡರ್ ಕೃಣಾಲ್ ಪಾಂಡ್ಯ (105), ಟಿಮ್ ಡೇವಿಡ್ (187) ಮತ್ತು ರೊಮೆರಿಯೊ ಶೆಫರ್ಡ್ ಅವರೆಲ್ಲರೂ ತಂಡಕ್ಕೆ ಅಗತ್ಯವಿದಾಗ ಮಿಂಚಿದ್ದಾರೆ. ಗೆಲುವಿನ ರೂವಾರಿಗಳಾಗಿದ್ದಾರೆ. 

ಬೌಲಿಂಗ್‌ನಲ್ಲಿಯೂ ತಂಡವು ಸಮತೋಲನದಿಂದ ಕೂಡಿದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ (21 ವಿಕೆಟ್), ಯಶ್ ದಯಾಳ್ (12), ಭುವನೇಶ್ವರ್ ಕುಮಾರ್ (15), ಕೃಣಾಲ್ ಪಾಂಡ್ಯ (15) ಮತ್ತು ಸುಯಶ್ ಶರ್ಮಾ (8) ಕೂಡ ಉತ್ತಮ ಲಯದಲ್ಲಿದ್ದಾರೆ. ಇವರೆಲ್ಲರ ಸಾಮರ್ಥ್ಯವು ಮಂಗಳವಾರ ಭೋರ್ಗರೆದರೆ ಆರ್‌ಸಿಬಿ ಅಭಿಮಾನಿಗಳ ವಲಯದಲ್ಲಿ ಸಂತಸದ ಮಹಾಪೂರ ಹರಿಯುವುದರಲ್ಲಿ ಸಂಶಯವೇ ಇಲ್ಲ. 

ವಿರಾಟ್‌ ಕೊಹ್ಲಿ

ಬೆಂಗಳೂರಿಗೆ ಶ್ರೇಯಸ್, ಚಾಹಲ್ ಸವಾಲು

ಪಂಜಾಬ್ ಕಿಂಗ್ಸ್ ತಂಡವು ಲೀಗ್ ಹಂತದಲ್ಲಿ ಒಂದು ಪಂದ್ಯ ಮತ್ತು ಮೊದಲ ಕ್ವಾಲಿಫಯರ್‌ನಲ್ಲಿ ಆರ್‌ಸಿಬಿ ಎದುರು ಸೋತಿದೆ. ಆದರೂ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅದರಲ್ಲೂ ಭಾನುವಾರ ರಾತ್ರಿ ಎರಡನೇ ಕ್ವಾಲಿಫಯರ್‌ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬ್ಯಾಟಿಂಗ್ ನೋಡಿದ ಮೇಲಂತೂ ಆರ್‌ಸಿಬಿ ಬೌಲರ್‌ಗಳು ತಮ್ಮ ಪೂರ್ವಯೋಜಿತ ತಂತ್ರಗಾರಿಕೆಯನ್ನು ಮರುಪರಿಶೀಲಿಸಿಕೊಳ್ಳಬೇಕೆನೋ?

ಮುಂಬೈ ತಂಡದ ಸ್ಟಾರ್ ಬೌಲರ್ ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಅಶ್ವಿನಿಕುಮಾರ್ ಅವರ ಎಸೆತಗಳನ್ನು ಶ್ರೇಯಸ್ ಲೀಲಾಜಾಲವಾಗಿ ಎದುರಿಸಿದ್ದರು. ಅಜೇಯ 87 ರನ್ ಗಳಿಸಿ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಆರ್‌ಸಿಬಿಯ ರಜತ್ ಪಾಟೀದಾರ್‌ ಅವರಿಗೆ ಹೋಲಿಸಿದರೆ ಶ್ರೇಯಸ್‌ಗೆ ನಾಯಕತ್ವದ ಅನುಭವ ಹೆಚ್ಚು. ಅಲ್ಲದೇ ತಾವು ನಾಯಕತ್ವ ವಹಿಸಿದ ತಂಡಗಳನ್ನು ಫೈನಲ್‌ ತಲುಪಿಸಿದ ಶ್ರೇಯವೂ ಅವರಿಗೆ ಇದೆ. ಅವರ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ತಲುಪಿ ಸೋತಿತ್ತು. ಹೋದ ವರ್ಷ ಶ್ರೇಯಸ್ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿತ್ತು. ಈ ವರ್ಷ ಶ್ರೇಯಸ್ ಅವರು ದುಬಾರಿ ಮೊತ್ತ ಪಡೆದು ಸೇರಿರುವ ಪಂಜಾಬ್ ತಂಡವೂ ಫೈನಲ್‌ ಪ್ರವೇಶಿಸಿದೆ.

ಶ್ರೇಯಸ್ ಅಲ್ಲದೇ ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ನೆಹಲ್ ವಧೇರಾ, ಶಶಾಂಕ್ ಸಿಂಗ್ ಹಾಗೂ ಜೋಶ್ ಇಂಗ್ಲಿಸ್ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್, ಕೈಲ್ ಜೆಮಿಸನ್, ಕನ್ನಡಿಗ ವೈಶಾಖ ವಿಜಯಕುಮಾರ್ ಮತ್ತು ಸ್ಪಿನ್ ಚತುರ ಯಜುವೇಂದ್ರ ಚಾಹಲ್ ಅವರು ಬೌಲಿಂಗ್ ವಿಭಾಗವನ್ನು ಶಕ್ತಿಯುತಗೊಳಿಸಿದ್ದಾರೆ. ಚಾಹಲ್ ಈ ಹಿಂದೆ ಕೆಲವು ವರ್ಷ ಆರ್‌ಸಿಬಿಯಲ್ಲಿ ಆಡಿದ್ದರು.

ಮಳೆ ಬಂದರೆ ಮೀಸಲು ದಿನ

ಅಹಮದಾಬಾದ್: ಭಾನುವಾರ ಇಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಎರಡನೇ ಕ್ವಾಲಿಫೈಯರ್ ಪಂದ್ಯದ ಸಂದರ್ಭದಲ್ಲಿ ಮಳೆ ಸುರಿದಿತ್ತು. ಅದರಿಂದಾಗಿ ಪಂದ್ಯವು ಎರಡು ತಾಸು ತಡವಾಗಿ ಆರಂಭವಾಯಿತು.

ಮಂಗಳವಾರ ಇಲ್ಲಿಯೇ ನಡೆಯಲಿರುವ ಫೈನಲ್‌ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿಯುವ ಮುನ್ಸೂಚನೆಗಳಿಲ್ಲ. ಒಂದು ವೇಳೆ ಮಳೆಯಾದರೆ ಪಂದ್ಯಕ್ಕೆ 120 ನಿಮಿಷಗಳ ಹೆಚ್ಚುವರಿ ಅವಧಿ ಇದೆ. ಒಂದೊಮ್ಮೆ ಮಳೆಯಿಂದಾಗಿ ಈ ದಿನ ಪಂದ್ಯವೇ ನಡೆಯದಿದ್ದರೆ ಮೀಸಲು ದಿನವಾದ ಬುಧವಾರ ಆಯೋಜಿಸಲಾಗುವುದು.

ಫೈನಲ್‌ ಪಂದ್ಯ: ಬಂದೋಬಸ್ತ್‌

ಬೆಂಗಳೂರು: ಐಪಿಎಲ್‌ ಫೈನಲ್‌ ಪಂದ್ಯದ ಅಂಗವಾಗಿ ಬೆಂಗಳೂರು ನಗರದ ಕೆಲವು ಸ್ಥಳಗಳಲ್ಲಿ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ರಾಯಲ್‌ ಚಾಲೆಂಜರ್ಸ್ (ಆರ್‌ಸಿಬಿ) ತಂಡವು ಟ್ರೋಫಿ ಜಯಿಸಿದರೆ ಅಭಿಮಾನಿಗಳು ಪಬ್‌ಗಳು, ಮೈದಾನಗಳು ಹಾಗೂ ಮಾಲ್‌ಗಳಲ್ಲಿ ವಿಜಯೋತ್ಸವ ಆಚರಣೆ ಮಾಡುವ ಸಾಧ್ಯತೆಯಿದೆ. ಹೀಗಾಗಿ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ನಗರದ ಯಾವುದೇ ರಸ್ತೆಗಳಲ್ಲಿ ಮೆರವಣಿಗೆಗೆ ಅವಕಾಶ ಇಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.