ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮಂಗಳವಾರ (ಮೇ 3) ಅಹಮದಾಬಾದ್‌ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಐಪಿಎಲ್ 18ನೇ ವರ್ಷಕ್ಕೆ ಕಾಲಿಸಿರುವಂತೆಯೇ ಇತ್ತಂಡಗಳು ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಲ್ಲಿ ಯಾವ ತಂಡ ಗೆದ್ದರೂ ನೂತನ ದಾಖಲೆ ಸೃಷ್ಟಿಯಾಗಲಿದೆ. ಏಕೆಂದರೆ ಇತ್ತಂಡಗಳು ಇದುವರೆಗೆ ಟ್ರೋಫಿ ಗೆದ್ದಿಲ್ಲ.
ಆರ್‌ಸಿಬಿ ತಂಡದ ತಾರೆ ವಿರಾಟ್ ಕೊಹ್ಲಿ, ಸರಿ ಸುಮಾರು ಎರಡು ದಶಕಗಳಿಂದ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಮೂರು ಸಲ ಫೈನಲ್ ತಲುಪಿದರೂ ಕಪ್ ಎತ್ತುವಲ್ಲಿ ಸಾಧ್ಯವಾಗಿರಲಿಲ್ಲ. ಈಗ ನಾಲ್ಕನೇ ಪ್ರಯತ್ನದಲ್ಲಿ ಕಪ್ ಗೆಲ್ಲಲಿದ್ದಾರೆ ಎಂಬ ನಿರೀಕ್ಷೆಯೂ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ರಜತ್ ಪಾಟೀದಾರ್ ಬಳಗವು ಎಲ್ಲ ವಿಭಾಗದಲ್ಲಿಯೂ ಸಮತೋಲಿತವಾಗಿದೆ. ಸ್ವತಃ ವಿರಾಟ್ ಅವರೇ ಅಮೋಘ ಲಯದಲ್ಲಿದ್ದು, ಈವರೆಗೆ 614 ರನ್ ಪೇರಿಸಿದ್ದಾರೆ.
ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದಿರುವ ಆರ್‌ಸಿಬಿ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಮತ್ತೊಂದೆಡೆ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೇಲುಗೈ ಸಾಧಿಸುವ ಮೂಲಕ ಪಂಜಾಬ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಈಗ ಮಗದೊಂದು ಸಲ ಆರ್‌ಸಿಬಿ ವಿರುದ್ಧದ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ.
ಆರ್‌ಸಿಬಿ ಪರ ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್ ಸಹ ಉತ್ತಮ ಲಯದಲ್ಲಿದ್ದು, 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ವಿರಾಟ್ ಜೊತೆ ಫಿಲ್ ಸಾಲ್ಟ್, ಮಯಂಕ್ ಅಗರವಾಲ್, ರಜತ್ ಪಾಟೀದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ರೊಮಾರಿಯೊ ಶೆಫಾರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಸುಯಶ್ ಶರ್ಮಾ ತಂಡಕ್ಕೆ ಆಧಾರ ಸ್ತಂಭವಾಗಿದ್ದಾರೆ.
ಅತ್ತ ಯಾವ ಹಂತದಲ್ಲೂ ಪಂಜಾಬ್ ತಂಡವನ್ನು ಆರ್‌ಸಿಬಿ ಹಗುರವಾಗಿ ಪರಿಗಣಿಸುವಂತಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಸೇರಿದಂತೆ ತಂಡದೆಲ್ಲ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಪ್ರಭಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್, ಪ್ರಿಯಾಂಶ್ ಆರ್ಯಾ, ನೇಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್, ವಿಜಯ ಕುಮಾರ್ ವೈಶಾಖ ತಂಡಕ್ಕೆ ಬಲ ತುಂಬಿದ್ದಾರೆ.
ಮೂರು ವಿಭಿನ್ನ ತಂಡಗಳನ್ನು ಐಪಿಎಲ್ ಫೈನಲ್‌ಗೆ ಮುನ್ನಡೆಸಿದ ದಾಖಲೆಯೂ ಶ್ರೇಯಸ್ ಅವರಿಗೆ ಸಲ್ಲುತ್ತದೆ. ಶ್ರೇಯಸ್ ನಾಯಕತ್ವದಲ್ಲಿ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2024ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಫೈನಲ್‌ಗೆ ತಲುಪಿತ್ತು. ಈ ಪೈಕಿ ಕಳೆದ ವರ್ಷ ಕೆಕೆಆರ್ ಚಾಂಪಿಯನ್ ಆಗಿತ್ತು.
ಒಟ್ಟಿನಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ರೋಚಕ ಹಣಾಹಣಿಯ ರಸದೌತಣ ಸಿಗಲಿದೆ ಎಂಬುದು ಗ್ಯಾರಂಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.