ADVERTISEMENT

IPL 2025 SRH vs RR | ಸನ್‌ರೈಸರ್ಸ್‌ಗೆ ರಾಯಲ್ಸ್‌ ಸವಾಲು

ತವರಿನಲ್ಲಿ ಗೆಲುವಿನ ಅಭಿಯಾನಕ್ಕೆ ಸಜ್ಜಾದ ಕಮಿನ್ಸ್‌ ಪಡೆ

ಪಿಟಿಐ
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
ಪ್ಯಾಟ್‌ ಕಮಿನ್ಸ್‌
ಪ್ಯಾಟ್‌ ಕಮಿನ್ಸ್‌   

ಹೈದರಾಬಾದ್‌: ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಮತ್ತು ಅನುಭವಿ ಬೌಲರ್‌ಗಳನ್ನು ಹೊಂದಿರುವ ಹಾಲಿ ರನ್ನರ್ಸ್‌ ಅಪ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯಲ್ಲಿ ಭಾನುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ತವರಿನಲ್ಲಿ ಅಭಿಯಾನ ಆರಂಭಿಸಲಿದೆ.

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡ ಆತಿಥೇಯ ತಂಡವು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತವನ್ನು ಗಳಿಸುವ ನಿರೀಕ್ಷೆಯಿದೆ.

ಸನ್‌ರೈಸರ್ಸ್ ಕಳೆದ ಋತುವಿನಲ್ಲಿ ಮೂರು ಬಾರಿ 250ಕ್ಕೂ ಅಧಿಕ ರನ್‌ ಪೇರಿಸಿತ್ತು. ಹೀಗಾಗಿ, ಈ ಬಾರಿಯೂ ಆರಂಭಿಕ ಆಟಗಾರರಾದ ಅಭಿಷೇಕ್ ಮತ್ತು ಹೆಡ್ ಆಟದ ಮೇಲೆ ಎಲ್ಲರ ಗಮನ ನೆಟ್ಟಿದೆ. ಫೆಬ್ರುವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಅಭಿಷೇಕ್ ಕೇವಲ 54 ಎಸೆತಗಳಲ್ಲಿ 250 ಸ್ಟ್ರೈಕ್ ರೇಟ್‌ನಲ್ಲಿ 135 ರನ್ ಸಿಡಿಸಿದ್ದರು.

ADVERTISEMENT

ಮತ್ತೊಂದೆಡೆ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದ ಚೇತರಿಸಿಕೊಂಡಿರುವುದು ತಂಡದ ಬಲ ಹೆಚ್ಚಿಸಿದೆ. ಅನುಭವಿ ವೇಗಿಗಳಾದ ನಾಯಕ ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಸ್ಪಿನ್ನರ್ ಆ್ಯಡಂ ಜಂಪಾ ಅವರು ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.

ಬೆರಳಿನ ಗಾಯದಿಂದ ಚೇತರಿಸಿಕೊಂಡಿರುವ ಕಾಯಂ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಕೀಪಿಂಗ್ ಹೊಣೆ ನಿಭಾಯಿಸದಿರುವಂತೆ ಬಿಸಿಸಿಐ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ತಂಡವನ್ನು ಮೊದಲು ಮೂರು ಪಂದ್ಯಗಳಲ್ಲಿ ರಿಯಾನ್‌ ಪರಾಗ್‌ ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಸಂಜು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೆ ಆಶ್ಚರ್ಯವಿಲ್ಲ.

ಇಂಗ್ಲೆಂಡ್‌ನ ಜೋಸ್ ಬಟ್ಲರ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದರಿಂದ ಬ್ಯಾಟಿಂಗ್ ಬಲ ಕೊಂಚ ಕಡಿಮೆಯಾಗಿದೆ. ಹೀಗಾಗಿ, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ನಿತೀಶ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಮತ್ತು ರಾಯಲ್ಸ್ ತಂಡಗಳು ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಎರಡರಲ್ಲೂ ಸನ್‌ರೈಸರ್ಸ್ ಪಾರಮ್ಯ ಮೆರೆದಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ 36 ರನ್‌ಗಳಿಂದ ರಾಜಸ್ಥಾನವನ್ನು ಮಣಿಸಿ ಹೈದರಾಬಾದ್‌ ತಂಡವು ಫೈನಲ್‌ ಪ್ರವೇಶಿಸಿತ್ತು.

ಬಲಾಬಲ

ಪಂದ್ಯ; 20

ಹೈದರಾಬಾದ್ ಜಯ; 11

ರಾಜಸ್ಥಾನ ಜಯ; 9

ಗರಿಷ್ಠ ಸ್ಕೋರ್‌

ಹೈದರಾಬಾದ್; 217

ರಾಜಸ್ಥಾನ; 220

ಕನಿಷ್ಠ ಸ್ಕೋರ್‌

ಹೈದರಾಬಾದ್‌; 127

ರಾಜಸ್ಥಾನ;102

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೊ ಹಾಟ್‌ಸ್ಟಾರ್‌

ರಿಯಾನ್‌ ಪರಾಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.