ಕ್ವಿಂಟನ್ ಡಿಕಾಕ್
ಗುವಾಹಟಿ: ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಮೊದಲ ಜಯದ ಸಿಹಿಯುಂಡಿತು.
ಬರ್ಸಾಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತ ತಂಡವು 8 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದಿತು. ಸ್ಪಿನ್ ಜೋಡಿ ವರುಣ್ ಚಕ್ರವರ್ತಿ (17ಕ್ಕೆ2) ಮತ್ತು ಮೊಯಿನ್ ಅಲಿ (23ಕ್ಕೆ2) ಅವರ ಮೋಡಿಯಿಂದಾಗಿ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 151 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.
ಕೋಲ್ಕತ್ತದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕ ಕಾಕ್ (ಅಜೇಯ 97; 61ಎ) ಅವರು ತಮ್ಮ ಅಬ್ಬರದ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ತಂಡವು 17.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 153 ರನ್ ಗಳಿಸಿತು. ರಾಜಸ್ಥಾನ ತಂಡವು ಸತತ ಎರಡನೇ ಪಂದ್ಯದಲ್ಲಿ ಸೋತಿತು.
ಟಾಸ್ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶುಷ್ಕ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಾಗಿರಲಿಲ್ಲ. ಈ ಪರಿಸ್ಥಿತಿಯ ಲಾಭ ಪಡೆಯುವಲ್ಲಿ ಸಫಲರಾದ ಕೋಲ್ಕತ್ತ ತಂಡದ ಸ್ಪಿನ್ ಜೋಡಿ ವರುಣ್ ಮತ್ತು ಮೋಯಿನ್ ಅಲಿ ರಾಯಲ್ಸ್ ಬ್ಯಾಟಿಂಗ್ ಪಡೆಯನ್ನು ಕಾಡಿದರು. ಅವರಿಗೆ ವೇಗಿ ವೈಭವ್ ಅರೋರಾ( 33ಕ್ಕೆ2) ಹಾಗೂ ಹರ್ಷಿತ್ ರಾಣಾ (36ಕ್ಕೆ2) ಕೂಡ ಉತ್ತಮ ಜೊತೆ ನೀಡಿದರು.
ಯಶಸ್ವಿ ಜೈಸ್ವಾಲ್ (29; 24ಎ) ಮತ್ತು ಸಂಜು ಸ್ಯಾಮ್ಸನ್ (13; 11ಎ) ಅವರು ಮೊದಲ ವಿಕೆಟ್ ಜತೆಯಾಟದಲ್ಲಿ 33 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಕೋಲ್ಕತ್ತದ ವೇಗಿ ವೈಭವ್ ಅವರು ಸಂಜು ವಿಕೆಟ್ ಉರುಳಿಸಿ ಜೊತೆಯಾಟ ಮುರಿದರು. ಕ್ರೀಸ್‌ಗೆ ಬಂದ ‘ಸ್ಥಳೀಯ ಹೀರೊ’ ರಿಯಾನ್ ಪರಾಗ್ 15 ಎಸೆತಗಳಲ್ಲಿ 25 ರನ್ ಸಿಡಿಸಿದರು. ಅದರಲ್ಲಿ ಭರ್ಜರಿ 3 ಸಿಕ್ಸರ್‌ಗಳಿದ್ದವು. ಯಶಸ್ವಿ ಮತ್ತು ಪರಾಗ್ ಅವರ ಜೊತೆಯಾಟವು ದೀರ್ಘವಾಗಿ ಬೆಳೆಯುವ ನಿರೀಕ್ಷೆ ಮೂಡಿತ್ತು. ಈ ಸಂದರ್ಭದಲ್ಲಿ ದಾಳಿಗಿಳಿದ ವರುಣ್ ಎಸೆತವನ್ನು ಆಡುವ ಧಾವಂತದಲ್ಲಿ ಪರಾಗ್ ದಂಡ ತೆತ್ತರು. ನಂತರದ ಓವರ್‌ನಲ್ಲಿ ಯಶಸ್ವಿ ಆಟಕ್ಕೆ ಮೊಯಿನ್ ಅಲಿ ತಡೆಯೊಡ್ಡಿದರು. ನಂತರ ಬೌಲರ್‌ಗಳು ಇನಿಂಗ್ಸ್ ಮೇಲೆ ಹಿಡಿತ ಸಾಧಿಸಿದರು.
ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಧ್ರುವ ಜುರೇಲ್ (33; 28ಎ) ತಮ್ಮ ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದರು. ಐದು ಬೌಂಡರಿ ಹೊಡೆದರು. ಕೊನೆಯ ಹಂತದಲ್ಲಿ ಜೋಫ್ರಾ ಆರ್ಚರ್ ಅವರು 2 ಸಿಕ್ಸರ್ ಸಿಡಿಸಿದರು. 7 ಎಸೆತಗಳಲ್ಲಿ 16 ರನ್ ಗಳಿಸಿದರು. ಆದರೂ ದೊಡ್ಡ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.
ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡಕ್ಕೆ ಮೊಯಿನ್ ಅಲಿ ಮತ್ತು ಕ್ವಿಂಟನ್ ಉತ್ತಮ ಆರಂಭ ಒದಗಿಸಿದರು. ರಿಯಾನ್ ಪರಾಗ್ ಅವರ ಚುರುಕಿನ ಫೀಲ್ಡಿಂಗ್ ನಿಂದಾಗಿ ಮೊಯಿನ್ ಅಲಿ ರನ್‌ಔಟ್ ಆದರು. ನಾಯಕ ರಹಾನೆ ಜೊತೆಗೆ ಡಿಕಾಕ್ ಅವರು ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಆದರೆ 11ನೇ ಓವರ್‌ನಲ್ಲಿ 39 ರನ್ ಸೇರಿಸಿದರು. ಸ್ಪಿನ್ನರ್ ವಣಿಂದು ಹಸರಂಗಾ ಅವರ ಬೌಲಿಂಗ್‌ನಲ್ಲಿ ರಹಾನೆ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ತುಷಾರ್ ದೇಶಪಾಂಡೆ ಕ್ಯಾಚ್ ಪಡೆದರು. ಆದರೆ ಇದರ ನಂತರ ರಾಜಸ್ಥಾನ ತಂಡಕ್ಕೆ ಸಂಭ್ರಮಿಸುವ ಅವಕಾಶವನ್ನು ಡಿಕಾಕ್ ಮತ್ತು ಅಂಗಕ್ರಿಷ್ ರಘುವಂಶಿ (ಔಟಾಗದೇ 22) ನೀಡಲಿಲ್ಲ. ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.