ವಿರಾಟ್ ಕೊಹ್ಲಿ
ಕ್ರಿಕೆಟ್ ಜಗತ್ತಿನಲ್ಲಿ ಫಿಟ್‌ನೆಸ್‌ಗೆ ಹೊಸ ಭಾಷ್ಯ ಬರೆದ ವಿರಾಟ್ ಕೊಹ್ಲಿ ಅವರೇ ಜೈಪುರದ ಬಿಸಿಲಿನ ಝಳದಿಂದ ಬಸವಳಿದರು.
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಹಾಗೂ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಬೆಂಗಳೂರು ತಂಡಗಳು ಮುಖಾಮುಖಿಯಾದವು.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 174 ರನ್ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿ, ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು.
ಆರಂಭಿಕ ಬ್ಯಾಟರ್‌ಗಳಾದ ಫಿಲ್ ಸಾಲ್ಟ್, ಕೊಹ್ಲಿ ಗಳಿಸಿದ ಅಮೋಘ ಅರ್ಧಶತಕಗಳು ಹಾಗೂ ದೇವದತ್ತ ಪಡಿಕ್ಕಲ್ ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 18.3 ಓವರ್‌ಗಳಲ್ಲೇ ಒಂದು ವಿಕೆಟ್‌ಗೆ 175 ರನ್ ಬಾರಿಸಿತು.
ಸಾಲ್ಟ್, 65 ರನ್ ಸಿಡಿಸಿ ಔಟಾದರೆ, ಕೊಹ್ಲಿ 65 ರನ್ ಹಾಗೂ ಪಡಿಕ್ಕಲ್ 40 ರನ್ ಬಾರಿಸಿ ಅಜೇಯರಾಗಿ ಉಳಿದರು.
ಆರ್‌ಆರ್ ಬ್ಯಾಟಿಂಗ್ ವೇಳೆ, ಪೂರ್ತಿ 20 ಓವರ್ ಕ್ಷೇತ್ರರಕ್ಷಣೆ ಮಾಡಿದ್ದ ಕೊಹ್ಲಿ, ನಂತರ ತಮ್ಮ ತಂಡ ಗೆಲುವಿನ ರನ್ ಗಳಿಸುವವರೆಗೂ ಬ್ಯಾಟಿಂಗ್ ಮಾಡಿದರು. 38.3 ಓವರ್‌ವರೆಗೆ ನಿರಂತರವಾಗಿ ಮೈದಾನದಲ್ಲೇ ಉಳಿದ ಅವರನ್ನು, ಬಿಸಿಲು ಕಾಡಿತು.
ಆರ್‌ಸಿಬಿ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ವನಿಂದು ಹಸರಂಗ ಹಾಕಿದ ನಾಲ್ಕನೇ ಎಸೆತವನ್ನು ಡೀಪ್ ಮಿಡ್‌ವಿಕೆಟ್‌ನತ್ತ ಬಾರಿಸಿದ ಕೊಹ್ಲಿ, ಎರಡು ರನ್‌ಗಾಗಿ ಓಡಿದರು. ಮೊದಲ ರನ್ ಅನ್ನು ವೇಗವಾಗಿ ಓಡಿ, ಎರಡನೆಯದನ್ನು ತುಸು ನಿಧಾನವಾಗಿ ಮುಗಿಸಿದರು. ಬಳಿಕ, ಎದೆ ಮೇಲೆ ಕೈ ಇಟ್ಟುಕೊಂಡು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಕರೆದು ಎದೆಬಡಿತವನ್ನು ಪರಿಶೀಲಿಸಲು ಹೇಳಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್‌ಸಿಬಿಯ ವೈದ್ಯಕೀಯ ಸಿಬ್ಬಂದಿ ಹಾಗೂ ಸಹ ಆಟಗಾರರು ಮೈದಾನಕ್ಕೆ ತೆರಳಿ ಕೊಹ್ಲಿಯನ್ನು ಉಪಚರಿಸಿದರು.
ಈ ಸಂದರ್ಭದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೊಹ್ಲಿ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
'ಅತ್ಯಂತ ಸದೃಢ, ಬಲಿಷ್ಠ ಯೋಧರೂ ಅಜೇಯರೇನಲ್ಲ. ವಿರಾಟ್ ಕೊಹ್ಲಿ ಸಹ ಮನುಷ್ಯನೇ ಎಂಬುದನ್ನು ಈ ದಿನ ನೆನಪು ಮಾಡಿದೆ' ಎಂದು ಟ್ವೀಟ್ ಮಾಡಿರುವ ವಿದಿತ್ ಶರ್ಮಾ ಎಂಬವರು, 'ವಿಶ್ರಾಂತಿ ಪಡೆಯಿರಿ ಚಾಂಪಿಯನ್ – ನಿಮ್ಮ ಉಪಸ್ಥಿತಿಯು ಸ್ಕೋರ್‌ಕಾರ್ಡ್‌ಗಿಂತಲೂ ಬಹಳ ಮುಖ್ಯವಾದದ್ದು' ಎಂದು ಸಲಹೆ ನೀಡಿದ್ದಾರೆ.
ಬ್ಯಾಟಿಂಗ್ ವೇಳೆ ಕೊಹ್ಲಿಗೆ ಉಸಿರಾಟದ ಸಮಸ್ಯೆ ಎದುರಾಯಿತು ಎಂದು ಕೆಲವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.