ಕುಲದೀಪ್ ಯಾದವ್ ಹಾಗೂ ಸುನಿಲ್ ನಾರಾಯಣ್
ಚಿತ್ರಗಳು: X / @DelhiCapitals, @KKRiders
ನವದೆಹಲಿ: ವೆಸ್ಟ್ ಇಂಡೀಸ್ ಕ್ರಿಕೆಟಿಗ ಸುನಿಲ್ ನಾರಾಯಣ್ ಅವರಿಂದ ಸಾಕಷ್ಟು ಪಾಠ ಕಲಿತಿರುವುದಾಗಿ ಭಾರತದ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಹೇಳಿದ್ದಾರೆ.
ಇವರಿಬ್ಬರು, ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಒಟ್ಟಿಗೆ ಆಡಿದ್ದರು.
ನಾರಾಯಣ್ ದಶಕದಿಂದ ಕೆಕೆಆರ್ ಪರ ಆಡುತ್ತಿದ್ದಾರೆ. 2016ರಿಂದ ಕೆಕೆಆರ್‌ನಲ್ಲಿದ್ದ ಕುಲದೀಪ್, 2022ರ ನಂತರ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ.
ʼಒಬ್ಬ ಬೌಲರ್ ಆಗಿ, ಪ್ರಾಬಲ್ಯ ಸಾಧಿಸುವ ಗುರಿಯನ್ನು ಸದಾ ಹೊಂದಿರಬೇಕು. ಜಸ್‌ಪ್ರೀತ್ ಬೂಮ್ರಾ, ಸುನಿಲ್ ನಾರಾಯಣ್ ಅವರಂತಹ ಆಟಗಾರರು ಅದನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಕೆಕೆಆರ್‌ನಲ್ಲಿ ಇದ್ದಾಗ, ನಾರಾಯಣ್ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ನಮಗಿಂತ ತುಂಬಾ ಮುಂದಿದ್ದಾರೆ. ಲೆಂಗ್ತ್ ಬೌಲಿಂಗ್‌ನ ಮಹತ್ವದ ಬಗ್ಗೆ ಸದಾ ಒತ್ತಿ ಹೇಳುತ್ತಿದ್ದರುʼ ಎಂದಿದ್ದಾರೆ.
ʼಅದಕ್ಕೂ ಮೊದಲು ನಾನು ನನ್ನ ಕೌಶಲಗಳ ಮೇಲಷ್ಟೇ ನಂಬಿಕೆ ಇಡುತ್ತಿದ್ದೆ. ಆದರೆ, ನಾರಾಯಣ್ ಹೇಳಿದ್ದು ಸರಿ ಎಂಬುದು ನಂತರ ಅರಿವಿಗೆ ಬಂತು ಎಂದು, 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದ ಕುಲದೀಪ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ರನ್ ಹೊಳೆ ಹರಿಸುತ್ತಿರುವ ಬ್ಯಾಟರ್‌ಗಳ ನಡುವೆ, ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಠಿಣ ಎಂದು ಕುಲದೀಪ್ ಅಭಿಪ್ರಾಯಪಟ್ಟಿದ್ದಾರೆ.
ʼಐಪಿಎಲ್, ಬೌಲರ್‌ಗಳ ಪಾಲಿಗೆ ಅತ್ಯಂತ ಸವಾಲಿನದ್ದು. ನೀವು ವಿಕೆಟ್ ಪಡೆಯಬಹುದು. ಆದರೆ, ಪ್ರತಿ ಓವರ್‌ಗೆ 6 ಅಥವಾ 7ರ ದರದಲ್ಲಿ ಬೌಲಿಂಗ್ ಮಾಡುವುದನ್ನು ನಿರೀಕ್ಷಿಸಲಾಗದು. ಅತ್ಯುತ್ತಮ ಆಟಗಾರರನ್ನು ಒಳಗೊಂಡ ಸ್ಪರ್ಧಾತ್ಮಕ ಮಾದರಿ ಇದುʼ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.