ADVERTISEMENT

IPL 2025 | ಬೌಲರ್‌ಗಳಿಗೆ ನೆರವಾದ ಎಂಜಲು, ಎರಡು ಚೆಂಡು: ಮೋಹಿತ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2025, 10:50 IST
Last Updated 16 ಏಪ್ರಿಲ್ 2025, 10:50 IST
<div class="paragraphs"><p>ಮೋಹಿತ್‌ ಶರ್ಮಾ (ಸಂಗ್ರಹ ಚಿತ್ರ)</p></div>

ಮೋಹಿತ್‌ ಶರ್ಮಾ (ಸಂಗ್ರಹ ಚಿತ್ರ)

   

ಪಿಟಿಐ ಚಿತ್ರ

ನವದೆಹಲಿ: ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಸುವುದು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಎರಡು ಚೆಂಡು ಬಳಕೆಗೆ ಅವಕಾಶ ಕಲ್ಪಿಸಿರುವುದರಿಂದ ಈ ಬಾರಿಯ ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಖಂಡಿತವಾಗಿಯೂ ನೆರವಾಗುತ್ತಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೋಹಿತ್‌ ಶರ್ಮಾ ಹೇಳಿದ್ದಾರೆ.

ADVERTISEMENT

ಚೆಂಡಿಗೆ ಎಂಜಲು ಹಚ್ಚುವುದನ್ನು ಕೋವಿಡ್‌ ಸಂದರ್ಭದಲ್ಲಿ ನಿಷೇಧಿಸಲಾಗಿತ್ತು. ಆದರೆ, ಈ ಬಾರಿಯ (2025ರ) ಐಪಿಎಲ್‌ ಆರಂಭಕ್ಕೂ ಮುನ್ನ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ತೆಗೆದುಹಾಕಿದೆ. ಹಾಗೆಯೇ, ಸಂಜೆ ಪಂದ್ಯಗಳ ಎರಡನೇ ಇನಿಂಗ್ಸ್‌ ವೇಳೆ ಇಬ್ಬನಿ ಸುರಿಯುವ ಸಾಧ್ಯತೆ ಇರುವುದರಿಂದ, ಬಳಸಿದ ಮತ್ತೊಂದು ಚೆಂಡನ್ನು 10 ಓವರ್‌ಗಳ ನಂತರ ಬಳಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಮಾತನಾಡಿರುವ ಶರ್ಮಾ, 'ಹೌದು, ಇದು (ಚೆಂಡು ಬದಲಾವಣೆ ನಿಯಮ) ಶೇ 100 ರಷ್ಟು ಸಹಕಾರಿ. ಕಳೆದ ಪಂದ್ಯದಲ್ಲಿ ನಾವು ಅದನ್ನು ನೋಡಿದ್ದೇವೆ. ಮೊದಲ ಇನಿಂಗ್ಸ್ ವೇಳೆ 12 ಓವರ್‌ಗಳ ನಂತರ ಇಬ್ಬನಿ ಸುರಿಯಲಾಗಿತ್ತು. ಎರಡನೇ ಇನಿಂಗ್ಸ್‌ ವೇಳೆ ಅದು ಮತ್ತಷ್ಟು ಹೆಚ್ಚಾಯಿತು. ಹಾಗಾಗಿ, ಚೆಂಡು ಬದಲಾವಣೆಯು ಮಹತ್ವದ ಪಾತ್ರ ವಹಿಸಲಿದೆ. ಆದರೆ, 15 ಅಥವಾ 16 ಓವರ್‌ ಮುಗಿಯುವ ಹೊತ್ತಿಗೆ ಎರಡನೇ ಚೆಂಡು ಕೂಡ ಹಳೇ ಚೆಂಡಿನಂತೆಯೇ ಆಗುತ್ತದೆ' ಎಂದು ಹೇಳಿದ್ದಾರೆ.

'ಇಬ್ಬನಿ ಸುರಿಯುವುದು ಖಾತ್ರಿಯಾದರೆ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬಹುದು' ಎಂದು ಅಭಿಪ್ರಾಯಪಟ್ಟಿರುವ ಅವರು, 'ಚೆಂಡಿಗೆ ಎಂಜಲು ಬಳಸುವುದರಿಂದ ಖಂಡಿತಾ ಬದಲಾವಣೆ ಕಾಣಲಿದೆ. ನಿಯಂತ್ರಣ ಸಾಧಿಸಲು ಬೌಲರ್‌ಗಳಿಗೆ ನೆರವಾಗುತ್ತದೆ' ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು 12 ರನ್‌ ಅಂತರದ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ, 5 ವಿಕೆಟ್‌ಗೆ 205 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಡೆಲ್ಲಿ, 193 ರನ್‌ ಗಳಿಸಿ ಆಲೌಟ್‌ ಆಗಿತ್ತು.

ಇಂದು ರಾಜಸ್ಥಾನ ರಾಯಲ್ಸ್‌ ವಿರುದ್ಧ ದೆಹಲಿಯಲ್ಲಿ ಸೆಣಸಾಟ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.