ಸನ್‌ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ
–ಪಿಟಿಐ ಚಿತ್ರ
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಈಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಶೈಲಿಯ ಬ್ಯಾಟರ್‌ಗಳ ಎದುರು ಬೌಲಿಂಗ್ ಮಾಡುವ ಕಠಿಣ ಸವಾಲು ಎದುರಾಗಿದೆ.
ಗಾಯದಿಂದ ಸುಮಾರು ಮೂರು ತಿಂಗಳು ವಿಶ್ರಾಂತಿಯಲ್ಲಿದ್ದ ಬೂಮ್ರಾ ಈಚೆಗೆ ಐಪಿಎಲ್‌ನಲ್ಲಿ ಕಣಕ್ಕಿಳಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಿನ ಪಂದ್ಯದಲ್ಲಿ ಬೂಮ್ರಾ ಬೌಲಿಂಗ್ ಪರಿಣಾಮಕಾರಿ ಆಗಿರಲಿಲ್ಲ. ಯಾರ್ಕರ್‌ಗಳನ್ನು ಪ್ರಯೋಗಿಸುವಲ್ಲಿ ನಿಖರತೆ ಇರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಕರುಣ್ ನಾಯರ್ ಕೂಡ ಬೂಮ್ರಾ ಎಸೆತಗಳನ್ನು ದಂಡಿಸಿದ್ದರು. ಆ ಪಂದ್ಯದಲ್ಲಿ ಬೂಮ್ರಾ 44 ರನ್ ನೀಡಿದ್ದರು.
31 ವರ್ಷದ ಬೂಮ್ರಾ ಅವರ ಮುಂದೆ ಈಗ ಕಠಿಣ ಪರೀಕ್ಷೆ ಎದುರಾಗಿದೆ. ಈಚೆಗಷ್ಟೇ ಮಿಂಚಿನ ವೇಗದ ಶತಕ ಬಾರಿಸಿದ ಅಭಿಷೇಕ್ ಶರ್ಮಾ, ಬೀಸು ಹೊಡೆತಗಳ ಪರಿಣತರಾದ ಇಶಾನ್ ಕಿಶನ್, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಕಟ್ಟಿಹಾಕುವ ಸವಾಲು ಬೂಮ್ರಾ ಮುಂದಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡದ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಕೂಡ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಅವರು ಉತ್ತಮ ಆರಂಭ ನೀಡಿದರೆ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಅನುಕೂಲವಾಗಲಿದೆ. ಅವರು ಕಳೆದ ಐದು ಪಂದ್ಯಗಳಿಂದ 56 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಬ್ಯಾಟಿಂಗ್ ವಿಭಾಗವು ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.
ಸನ್‌ರೈಸರ್ಸ್ ತಂಡ ಕೂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಸತತ ನಾಲ್ಕು ಸೋಲುಗಳ ನಂತರ ಈಚೆಗೆ ಪಂಜಾಬ್ ಕಿಂಗ್ಸ್ ಎದುರು ಜಯಿಸಿತ್ತು. ಈ ಟೂರ್ನಿಯಲ್ಲಿ ಒಟ್ಟು ಆರು ಪಂದ್ಯಗಳನ್ನು ಆಡಿರುವ ತಂಡವು ಎರಡರಲ್ಲಿ ಗೆದ್ದಿದೆ. ಮುಂಬೈ ಕೂಡ ಆರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಉಳಿದ ಪಂದ್ಯಗಳಲ್ಲಿ ಸೋತಿದೆ. ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್ ಮತ್ತು ಇಶಾನ್ ಮಾಲಿಂಗ ಅವರು ಪ್ರಮುಖ ಶಕ್ತಿಯಾಗಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.