ಪಂದ್ಯದ ಬಳಿಕ ಪರಸ್ಪರ ಅಭಿನಂದಿಸಿದ ಉಭಯ ತಂಡಗಳ ಆಟಗಾರರು
ರಾಯಿಟರ್ಸ್ ಚಿತ್ರ
ಲಖನೌ: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ (59; 20ಎ, 4x4, 6x6) ಅವರ ಬಿರುಸಿನ ಅರ್ಧಶತಕದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಉಪಯುಕ್ತ ಕೊಡುಗೆಯ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸೋಮವಾರ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತು.
ಈ ಸೋಲಿನೊಂದಿಗೆ ಲಖನೌ ತಂಡದ ಪ್ಲೇಆಫ್ ಅವಕಾಶದ ಬಾಗಿಲು ಮುಚ್ಚಿತು. ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಈಗಾಗಲೇ ಪ್ಲೇ ಆಫ್‌ಗೆ ಟಿಕೆಟ್ ಪಡೆದಿವೆ. ಕ್ಷೀಣ ಅವಕಾಶ ಹೊಂದಿದ್ದ ಲಖನೌ ತಂಡ ಹೊರಬಿದ್ದ ಕಾರಣ ಉಳಿದ ಒಂದು ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪೈಪೋಟಿಯಿದೆ. ಇದೇ 21ರಂದು ಈ ತಂಡಗಳು ಮುಖಾಮುಖಿಯಾಗಲಿದ್ದು, ಆ ಪಂದ್ಯ ನಿರ್ಣಾಯಕವಾಗುವ ಸಾಧ್ಯತೆಯಿದೆ.
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಲಖನೌ ತಂಡ 7 ವಿಕೆಟ್‌ಗೆ 205 ರನ್‌ಗಳ ಸವಾಲಿನ ಮೊತ್ತ ಗಳಿಸಿತ್ತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು 10 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ಗೆ 206 ರನ್ ಗಳಿಸಿ ಸಂಭ್ರಮಿಸಿತು. ಈ ಮೊದಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಹಾಲಿ ರನ್ನರ್ಸ್ ಅಪ್ ಹೈದರಾಬಾದ್ ತಂಡಕ್ಕೆ ಇದು 12 ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ.
ಟ್ರಾವಿಸ್ ಹೆಡ್ ಬದಲು ಅವಕಾಶ ಪಡೆದ ಅಥರ್ವ ತೈಡೆ (13) ಅವರು ಅಭಿಷೇಕ್ ಜೊತೆ ಇನಿಂಗ್ಸ್ ಆರಂಭಿಸಿದರು. ತೈಡೆ ಬೇಗ ನಿರ್ಗಮಿಸಿದರೂ ಅಭಿಷೇಕ್ ಅವರನ್ನು ಸೇರಿಕೊಂಡ ಇಶಾನ್ ಕಿಶನ್ (35) ಎರಡನೇ ವಿಕೆಟ್ ಜೊತೆಯಾಟದಲ್ಲಿ ವೇಗದ 82 (35 ಎಸೆತ) ರನ್ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.
ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (47;28ಎ) ಮತ್ತು ಕಮಿಂದು ಮೆಂಡಿಸ್ (32;21ಎ) ಜವಾಬ್ದಾರಿಯ ಆಟವಾಡಿದರು. ಈ ಮಧ್ಯೆ ಬಲ ಮಂಡಿರಜ್ಜು ಸ್ನಾಯು ಸೆಳೆತಕ್ಕೊಳಗಾದ ಮೆಂಡಿಸ್ ಆಟದಿಂದ ಹಿಂದೆ ಸರಿದರು. ನಂತರದಲ್ಲಿ ಅನಿಕೇತ್ ವರ್ಮಾ (ಔಟಾಗದೇ 5) ಮತ್ತು ನಿತೀಶ್ ಕುಮಾರ್ ರೆಡ್ಡಿ (ಔಟಾಗದೇ 5) ಗೆಲುವಿನ ಔಪಚಾರ ಪೂರೈಸಿದರು.
ಮಾರ್ಷ್–ಏಡನ್ ಅಬ್ಬರ: ಇದಕ್ಕೆ ಮೊದಲು ಲಖನೌ ತಂಡವನ್ನು ಎಂದಿನಂತೆ ಮೂವರು ಪ್ರಮುಖ ಆಟಗಾರರು ಆಧರಿಸಿದರು. ಆರಂಭ ಆಟಗಾರರಾದ ಮಿಚೆಲ್ ಮಾರ್ಷ್ (65, 39 ಎ, 4x6, 6x6) ಮತ್ತು ಏಡನ್ ಮರ್ಕರಂ (61, 38 ಎ, 4x4, 6x4) ಅವರು ಮೊದಲ ವಿಕೆಟ್‌ಗೆ 115 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ನಿಕೋಲಸ್ ಪೂರನ್ ಉಪಯುಕ್ತ 45 ರನ್ ಗಳಿಸಿದರು.
ಮಾರ್ಷ್–ಏಡನ್ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಉತ್ತಮ ಆರಂಭ ಪಡೆದರೂ, ಕೊನೆಯ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರನ್‌ವೇಗಕ್ಕೆ ಒಂದಿಷ್ಟು ಕಡಿವಾಣ ಹಾಕಿತು. ಮೊದಲ 10 ಓವರುಗಳ ಆಟದಲ್ಲಿ ವಿಕೆಟ್ ನಷ್ಟವಿಲ್ಲದೇ 108 ರನ್ ಗಳಿಸಿದ್ದ ಲಖನೌ ದೊಡ್ಡ ಮೊತ್ತ ಪೇರಿಸುವಂತೆ ಕಂಡಿತ್ತು. ಆದರೆ ಸನ್‌ರೈಸರ್ಸ್ ಬೌಲರ್‌ಗಳು ಕೊನೆಯ 10 ಓವರುಗಳಲ್ಲಿ 97 ರನ್ ಬಿಟ್ಟುಕೊಟ್ಟರೂ 7 ವಿಕೆಟ್‌ಗಳನ್ನು ಪಡೆದು ಆತಿಥೇಯ ತಂಡಕ್ಕೆ ಕಡಿವಾಣ ಹಾಕಿದರು.
ನಿಕೋಲಸ್ ಪೂರನ್ ಅವರಿಗಿಂತ ಮೊದಲೇ ಕ್ರೀಸಿಗೆ ಬಂದ ನಾಯಕ ರಿಷಭ್ ಪಂತ್ (7) ಅವರ ಪರದಾಟ ಮುಂದುವರಿಯಿತು. ಈ ಋತುವಿನಲ್ಲಿ ಕ್ರಮಾಂಕದಲ್ಲಿ ಕೆಲವು ಬಾರಿ ಬದಲಾವಣೆ ಮಾಡಿದರೂ ಅವರಿಗೆ ಯಶಸ್ಸು ಒಲಿದಿಲ್ಲ. ಅವರು ಇಶಾನ್ ಮಾಲಿಂಗ ಅವರ ಯಾರ್ಕರ್ ಒಂದನ್ನು ತಡೆ ಯುವ ಯತ್ನದಲ್ಲಿ ಬೌಲರ್‌ಗೇ ಕ್ಯಾಚ್ ನೀಡಿದರು.
ಮಾರ್ಷ್ ನಿರ್ಗಮನದ ನಂತರ ರನ್‌ವೇಗ ತಗ್ಗಿತು. ನಿಕೋಲಸ್ ಪೂರನ್ ಆಕ್ರಮಣದ ಆಟಕ್ಕೆ ಯತ್ನಿಸಿದರೂ ಎಂದಿನಂತೆ ಸಿಕ್ಸರ್‌ಗಳನ್ನೆತ್ತಲು ಅವರಿಗೆ ಸಾಧ್ಯವಾಗಲಿಲ್ಲ. 16ನೇ ಓವರಿನಲ್ಲಿ ಮರ್ಕರಂ ನಿರ್ಗಮಿಸಿದ ಮೇಲೆ 40 ರನ್ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಬಿದ್ದವು. ಮರ್ಕರಂ ಅವರನ್ನು ಬೌಲ್ಡ್ ಮಾಡಿದ ಹರ್ಷಲ್ ಪಟೇಲ್ ಐಪಿಎಲ್‌ನಲ್ಲಿ 150ನೇ ವಿಕೆಟ್ ಪಡೆದರು. ಲಸಿತ್ ಮಾಲಿಂಗ (105 ಪಂದ್ಯ) ಅವರನ್ನು ಬಿಟ್ಟರೆ ಹರ್ಷಲ್ (117 ಪಂದ್ಯ) ಈ ಮೈಲಿಗಲ್ಲನ್ನು ವೇಗವಾಗಿ ದಾಟಿದ ಎರಡನೇ ಬೌಲರ್ ಎನಿಸಿದರು.
ಹಾಲಿ ಐಪಿಎಲ್‌ನಲ್ಲಿ ಮೊದಲ ಬಾರಿ ಬೌಲಿಂಗ್ ಮಾಡಿದ್ದ ನಿತೀಶ್ ರೆಡ್ಡಿ ಕೊನೆಯ ಓವರಿನಲ್ಲಿ 20 ರನ್ ಬಿಟ್ಟುಕೊಟ್ಟರು. ಕೊನೆಯ ಎಸೆತವನ್ನು ಆಕಾಶ್ ದೀಪ್ ಸಿಕ್ಸರ್‌ಗಟ್ಟುವ ಮೂಲಕ ತಂಡದ ಮೊತ್ತ 200 ದಾಟಿಸಿದರು.
ಸಂಕಿಪ್ತ ಸ್ಕೋರು
ಲಖನೌ ಸೂಪರ್ ಜೈಂಟ್ಸ್: 20 ಓವರುಗಳಲ್ಲಿ 7 ವಿಕೆಟ್‌ಗೆ 205 (ಮಿಚೆಲ್ ಮಾರ್ಷ್ 65, ಏಡನ್ ಮರ್ಕರಂ 61, ನಿಕೋಲಸ್ ಪೂರನ್ 45; ಹರ್ಷ ದುಬೆ 44ಕ್ಕೆ1, ಹರ್ಷಲ್ ಪಟೇಲ್ 49ಕ್ಕೆ1, ಇಶಾನ್ ಮಾಲಿಂಗ 28ಕ್ಕೆ2, ನಿತೀಶ್ ಕುಮಾರ್ ರೆಡ್ಡಿ 28ಕ್ಕೆ1)
ಸನ್‌ರೈಸರ್ಸ್ ಹೈದರಾಬಾದ್: 18.2 ಓವರುಗಳಲ್ಲಿ 4 ವಿಕೆಟ್‌ಗೆ 206 (ಅಭಿಷೇಕ್ ಶರ್ಮಾ 59, ಇಶಾನ್ ಕಿಶನ್ 35, ಹೆನ್ರಿಚ್ ಕ್ಲಾಸೆನ್ 47, ಕಮಿಂದು ಮೆಂಡಿಸ್ 32; ದಿಗ್ವೇಶ್ ರಾಠಿ 37ಕ್ಕೆ 2).
ಪಂದ್ಯದ ಆಟಗಾರ: ಅಭಿಷೇಕ್ ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.