ADVERTISEMENT

IPL 2025 | RCB vs PBKS: ಕಿಂಗ್ಸ್‌ಗೆ ತಿರುಗೇಟು ನೀಡುವುದೇ ರಾಯಲ್ ಚಾಲೆಂಜರ್ಸ್?

ಪಂಜಾಬ್ –ಬೆಂಗಳೂರು ತಂಡಗಳ ಹಣಾಹಣಿ ಇಂದು; ರಜತ್ ಪಾಟೀದಾರ್ ಬಳಗಕ್ಕೆ ಬ್ಯಾಟಿಂಗ್ ಲಯದ ಚಿಂತೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 23:30 IST
Last Updated 19 ಏಪ್ರಿಲ್ 2025, 23:30 IST
<div class="paragraphs"><p>ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಹ್ಯಾಜಲ್‌ವುಡ್ ಮತ್ತು ವಿರಾಟ್ ಕೊಹ್ಲಿ</p></div>

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಹ್ಯಾಜಲ್‌ವುಡ್ ಮತ್ತು ವಿರಾಟ್ ಕೊಹ್ಲಿ

   

  –ಪಿಟಿಐ ಚಿತ್ರ

ಮುಲ್ಲನಪುರ, ಪಂಜಾಬ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಸೋತಿದೆ. ಆದರೆ ತವರಿನಾಚೆಯ ತಾಣಗಳಲ್ಲಿ ಆಡಿದ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಜಯಭೇರಿ ಬಾರಿಸಿದೆ.

ADVERTISEMENT

ಅದರಿಂದಾಗಿ ಭಾನುವಾರ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬಳಗವನ್ನು ಆರ್‌ಸಿಬಿ ತಂಡವು ಸೋಲಿಸುವ ವಿಶ್ವಾಸ ಹೆಚ್ಚಿದೆ. ಉಭಯ ತಂಡಗಳು ಒಂದೇ ದಿನದ ಅಂತರದಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.

ಶುಕ್ರವಾರ ರಾತ್ರಿ ಇದೇ ಕಿಂಗ್ಸ್ ತಂಡವು ಆರ್‌ಸಿಬಿಯನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಮಳೆಯಿಂದಾಗಿ ಸುಮಾರು 2 ಗಂಟೆಗೂ ಹೆಚ್ಚು ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ವಿಭಾಗ ಕುಸಿದಿತ್ತು. ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ ಟಿಮ್ ಡೇವಿಡ್ ಅಬ್ಬರಿಸದೇ ಹೋಗಿದ್ದರೆ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಸಾಧ್ಯತೆ ಇತ್ತು. ಡೇವಿಡ್ ಅರ್ಧಶತಕ ಹೊಡೆದರೂ ತಂಡದ ಮೊತ್ತವು ಮೂರಂಕಿ ಮುಟ್ಟಲಿಲ್ಲ. 14 ಓವರ್‌ಗಳಿಗೆ (ಇನಿಂಗ್ಸ್‌ವೊಂದಕ್ಕೆ) ನಿಗದಿಯಾಗಿದ್ದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್‌ಗಳಿಗೆ 95 ರನ್‌ ಗಳಿಸಿತ್ತು. ಶ್ರೇಯಸ್ ಅಯ್ಯರ್ ಬಳಗವು 12.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 98 ರನ್‌ ಗಳಿಸಿ ಜಯಿಸಿತ್ತು.

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರ ವೈಫಲ್ಯ ತಂಡವನ್ನು ಕಾಡಿತು.

‘ನಮ್ಮ ವಿಕೆಟ್‌ಗಳು ಕಡಿಮೆ ಅಂತರದಲ್ಲಿ ಪತನವಾದವು. ದೊಡ್ಡ ಮೊತ್ತ ಪೇರಿಸಲು ಜೊತೆಯಾಟಗಳು ಮುಖ್ಯ. ಈ ಸೋಲು ನಮಗೆ ಪಾಠ’ ಎಂದು ಪಂದ್ಯದ ನಂತರ ರಜತ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಕೃಣಾಲ್ ಮತ್ತು ಡೇವಿಡ್ ಅವರು ಉತ್ತಮ ಲಯ ಕಾಪಾಡಿಕೊಳ್ಳಬೇಕು. ಅಗ್ರ ಬ್ಯಾಟರ್‌ಗಳು ಫಾರ್ಮ್‌ಗೆ ಮರಳಿದರೆ ಪಂಜಾಬ್ ಎದುರು ಮುಯ್ಯಿ ತೀರಿಸಿಕೊಳ್ಳುವುದು ಸಾಧ್ಯವಿದೆ. ಅದಕ್ಕಾಗಿ ಆರ್‌ಸಿಬಿ ಬ್ಯಾಟರ್‌ಗಳು ಕಿಂಗ್ಸ್ ಬೌಲರ್‌ಗಳಾದ ಅರ್ಷದೀಪ್ ಸಿಂಗ್, ಹರಪ್ರೀತ್ ಬ್ರಾರ್, ಝೇವಿಯರ್ ಬಾರ್ಟಲೆಟ್ ಹಾಗೂ ಮಾರ್ಕೊ ಯಾನ್ಸೆನ್ ಅವರನ್ನು ಎದುರಿಸಿ ನಿಲ್ಲಬೇಕು. ಪಂಜಾಬ್ ಬೌಲಿಂಗ್ ಪಡೆಯು ಕಳೆದ ಎರಡೂ ಪಂದ್ಯಗಳಲ್ಲಿ ಎದುರಾಳಿ ತಂಡಗಳು 100ರ ಮೊತ್ತ ಮುಟ್ಟದಂತೆ ನೋಡಿಕೊಂಡಿವೆ.

ಆರ್‌ಸಿಬಿಯ ಬೌಲಿಂಗ್ ವಿಭಾಗ ಉತ್ತಮವಾಗಿದೆ. ಅದರಲ್ಲೂ ಜೋಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರು ಪರಿಣಾಮಕಾರಿ ದಾಳಿ ನಡೆಸಿದ್ದರು. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಪಂಜಾಬ್ ತಂಡದ ಬ್ಯಾಟರ್‌ಗಳಾದ ಶ್ರೇಯಸ್ ಅಯ್ಯರ್, ಪ್ರಿಯಾಂಶ್ ಆರ್ಯ, ನೆಹಲ್ ವಧೇರಾ, ಶಶಾಂಕ್ ಸಿಂಗ್, ಪ್ರಭಸಿಮ್ರನ್ ಸಿಂಗ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಕಟ್ಟಿಹಾಕುವ ಹೊಣೆ ಆರ್‌ಸಿಬಿ ಬೌಲರ್‌ಗಳಿಗೆ ಇದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್ 

ಪಂಜಾಬ್ ಕಿಂಗ್ಸ್ ತಂಡದ ಅರ್ಷದೀಪ್ ಸಿಂಗ್ ಮತ್ತು ವೈಶಾಖ ವಿಜಯಕುಮಾರ್‌ ಅಭ್ಯಾಸ  –ಪಿಟಿಐ ಚಿತ್ರ

ಆರ್‌ಸಿಬಿ ದಾಖಲೆ!

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ತವರಿನಂಗಳದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ದಾಖಲೆಯನ್ನು ಆರ್‌ಸಿಬಿ ಮಾಡಿದೆ.

ಒಟ್ಟು 46 ಪಂದ್ಯಗಳನ್ನು ತವರಿನಲ್ಲಿ ಸೋತಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 45 ಪಂದ್ಯಗಳನ್ನು ಸೋತಿದೆ.  ಕೋಲ್ಕತ್ತ ನೈಟ್ ರೈಡರ್ಸ್ (38; ಈಡನ್ ಗಾರ್ಡನ್)  ಮುಂಬೈ ಇಂಡಿಯನ್ಸ್ (34; ವಾಂಖೆಡೆ) ಮತ್ತು ಪಂಜಾಬ್ ಕಿಂಗ್ಸ್‌ (30; ಮೊಹಾಲಿ) ತಂಡಗಳು ನಂತರದ ಸ್ಥಾನಗಳಲ್ಲಿವೆ.

ಮನೋಜ್ ಪದಾರ್ಪಣೆ
ಪಂಜಾಬ್ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮನೋಜ್ ಬಾಂಢಗೆ ಪದಾರ್ಪಣೆ ಮಾಡಿದರು. ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿರುವ ಮನೋಜ್ ಅವರು ಈ ಪಂದ್ಯದಲ್ಲಿ ಇಂಪ್ಯಾಕ್ಟ್‌ ಸಬ್‌ಸ್ಟಿಟ್ಯೂಟ್ ಆಗಿ ಕಣಕ್ಕಿಳಿದರು. ಆರ್‌ಸಿಬಿ ಇನಿಂಗ್ಸ್‌ನಲ್ಲಿ ಅವರು ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಗೆ ಇಂಪ್ಯಾಕ್ಟ್‌ ಸಬ್ ಆಗಿ ಅವಕಾಶ ಪಡೆದರು. ಅವರು 4 ಎಸೆತಗಳಲ್ಲಿ 1 ರನ್‌ ಗಳಿಸಿದರು. ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.