ಅಹಮದಾಬಾದ್: ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಮೊದಲ ಗೆಲುವಿಗೆ ಪಡೆಯಲು ತುದಿಗಾಲಲ್ಲಿವೆ. ಒಂದು ಪಂದ್ಯ ನಿಷೇಧದ ನಂತರ ನಾಯಕ ಹಾರ್ದಿಕ್ ಪಾಂಡ್ಯ ಅವರು ತಂಡಕ್ಕೆ ಮರಳುತ್ತಿರುವುದು ಮುಂಬೈ ಇಂಡಿಯನ್ಸ್‌ಗೆ ಅಗತ್ಯವಿದ್ದ ಸಮತೋಲನವನ್ನು ನೀಡಲಿದೆ.
ಮುಂಬೈ ತಂಡ ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಸೋಲುವುದು ಸಂಪ್ರದಾಯವೇ ಆದಂತಿದೆ. ಈ ಬಾರಿ ಅದು ಚೆನ್ನೈ ಸೂಪರ್ ಕಿಂಗ್ಸ್ ಎದುರು ನಾಲ್ಕು ವಿಕೆಟ್‌ಗಳಿಂದ ಸೋತಿದೆ. ದೊಡ್ಡ ಮೊತ್ತದ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 11 ರನ್‌ಗಳಿಂದ ಪಂಜಾಬ್ ಕಿಂಗ್ಸ್ ಎದುರು ಸೋಲನುಭವಿಸಿದೆ.
ಮೊದಲ ಮತ್ತು ಎರಡನೇ ಪಂದ್ಯದ ಮಧ್ಯೆ ವಾರದ ಅಂತರವಿದ್ದ ಕಾರಣ ಮುಂಬೈ ಇಂಡಿಯನ್ಸ್ ತಂಡವು ಜಾಮನಗರದ ರಿಲಯನ್ಸ್ ಧಾಮದಲ್ಲಿ ವಿಶ್ರಾಂತಿ ಪಡೆದು ಲವಲವಿಕೆಯಲ್ಲಿದೆ.
ದೇಶದ ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ಗೈರು ಮುಂಬೈ ತಂಡವನ್ನು ಕಾಡುತ್ತಿದೆ. ಸಾಲದ್ದಕ್ಕೆ ಹಾರ್ದಿಕ್ ಅವರ ಅನುಪಸ್ಥಿತಿ ಹಿನ್ನಡೆ ಉಂಟುಮಾಡಿತ್ತು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಅವರು ಬ್ಯಾಟಿನಿಂದಾಗಲಿ, ಚೆಂಡಿನಿಂದಾಗಲಿ ಪಂದ್ಯದ ಗತಿ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
ಅಹಮದಾಬಾದಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ 475 ರನ್‌ಗಳು ಹರಿದುಬಂದಿದ್ದವು. ಕಿಂಗ್ಸ್ 243 ರನ್ ಹೊಡೆದಿದ್ದರೆ ಟೈಟನ್ಸ್ 232 ರನ್ ಬಾರಿಸಿತ್ತು.
ಗುಜರಾತ್ ಟೈಟನ್ಸ್‌ಗೆ ಕಳವಳದ ವಿಷಯವೆಂದರೆ ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಪರಿಣಾಮ ಬೀರದಿರುವುದು. ಮೊದಲ ಪಂದ್ಯದಲ್ಲಿ ಅವರನ್ನು ಪಂಜಾಬ್ ಬ್ಯಾಟರ್‌ಗಳು ದಂಡಿಸಿದ್ದು, 54 ರನ್ ತೆತ್ತಿದ್ದರು. ಇದು ಕೋಚ್ ಆಶಿಶ್ ನೆಹ್ರಾ ಅವರನ್ನು ಚಿಂತೆಗೆ ದೂಡಿದ. ಹೀಗಾಗಿ ದಕ್ಷಿಣ ಆಫ್ರಿಕಾ ಕಗಿಸೊ ರಬಾಡ ಮತ್ತು ಅಫ್ಗನ್ ಸ್ಪಿನ್ನರ್ ರಶೀದ್ ಖಾನ್ ಅವರ ಮೇಲೆ ಹೆಚ್ಚು ಒತ್ತಡವಿದೆ.
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಉತ್ತಮ ಲಯದಲ್ಲಿಲ್ಲ. ರೋಹಿತ್ ಶರ್ಮಾ ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಪಾಂಡ್ಯ ಸೇರ್ಪಡೆ ತಂಡಕ್ಕೆ ಬಲ ನೀಡಲಿದೆ. ಅವರು ವೈಡ್ ಯಾರ್ಕರ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಬಲ್ಲರು. ಇದೇ ತಂತ್ರವನ್ನು ಪಂಜಾಬ್ ಕಿಂಗ್ಸ್ ವೇಗಿ ವೈಶಾಖ ವಿಜಯಕುಮಾರ್ ಈ ಹಿಂದಿನ ಪಂದ್ಯದಲ್ಲಿ ಬಳಸಿ ಯಶಸ್ಸು ಕಂಡಿದ್ದರು
ವಿಘ್ನೇಶ್‌ಗೆ ಸವಾಲು: ಮೊದಲ ಪಂದ್ಯದಲ್ಲಿ ಚೆನ್ನೈ ತಂಡದ ಮೂರು ವಿಕೆಟ್‌ಗಳನ್ನು ಕಿತ್ತು ಗಮನ ಸೆಳೆದಿದ್ದ ಎಡಗೈ ರಿಸ್ಟ್ ಸ್ಪಿನ್ನರ್ ವಿಘ್ನೇಶ್ ಪುತ್ತೂರು ಅವರಿಗೆ ಈ ಪಂದ್ಯ ಪರೀಕ್ಷೆಯಾಗಲಿದೆ. ಚೆಪಾಕ್ ಸ್ಪಿನ್ ಸ್ನೇಹಿಯಾದರೆ, ಮೊಟೆರಾದ ಕ್ರೀಡಾಂಗಣ ಅಷ್ಟೇನೂ ನೆರವಾಗುವುದಿಲ್ಲ. ಪಾಂಡ್ಯ ಅವರನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಕುತೂಹಲವಿದೆ.
ಶುಭಮನ್ ಗಿಲ್ ಅವರ ಕೊಡುಗೆ ಟೈಟನ್ಸ್ ಪಾಲಿಗೆ ಮಹತ್ವದ್ದು. ತಂಡವು, ಶರ್ಫೇನ್ ರುದರ್‌ಫೋರ್ಡ್ ಬದಲು ಈ ಪಂದ್ಯಕ್ಕೆ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಬ್ಯಾಟಿಂಗ್ ಜೊತೆ ಅವರು ಆಫ್ ಸ್ಪಿನ್ ಬೌಲ್ ಮಾಡಬಲ್ಲರು.
ಟೈಟನ್ಸ್ ಬೌಲಿಂಗ್ ಕಡೆ ಹೆಚ್ಚು ಗಮನಹರಿಸಬೇಕಾಗಿದೆ. ವೇಗಿಗಳಾದ ಸಿರಾಜ್, ಪ್ರಸಿದ್ಧ ಮತ್ತು ಅನುಭವಿ ಇಶಾಂತ್ ಮೂವರು ಒಂದೇ ಶೈಲಿಯ ಬೌಲರ್‌ಗಳು. ರಬಾಡ ಅವರ ಬತ್ತಳಿಕೆಯಲ್ಲಿ ವೈವಿಧ್ಯವಿದೆ.
ಪಂದ್ಯ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಕೆಕೆಆರ್– ಎಲ್‌ಎಸ್‌ಜಿ ಪಂದ್ಯ ಏ.8ಕ್ಕೆ
ಕೋಲ್ಕತ್ತ (ಪಿಟಿಐ): ರಾಮನವಮಿ ಉತ್ಸವದ ಮೆರವಣಿಗಳ ಕಾರಣ, ಏಪ್ರಿಲ್ 6ರಂದು ಇಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಏಪ್ರಿಲ್ 8ಕ್ಕೆ ಮುಂದೂಡಿದೆ.
ಇದರಿಂದ 8ರಂದು (ಮಂಗಳವಾರ) ಎರಡು ಪಂದ್ಯಗಳು ಇರಲಿವೆ. ಕೆಕೆಆರ್–ಎಲ್‌ಎಸ್‌ಜಿ ಪಂದ್ಯ ಅಂದು ಮಧ್ಯಾಹ್ನ ಆರಂಭವಾಗಲಿದೆ. ಚಂಡೀಗಢದಲ್ಲಿ ಪಂಬಾಬ್ ಕಿಂಗ್ಸ್– ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಈ ಮೊದಲೇ ನಿಗದಿಯಾದಂತೆ ಸಂಜೆ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.