ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಈ ವರ್ಷದ ಆರಂಭದಲ್ಲಿ ಜಾರಿಗೊಳಿಸಿದ್ದ ಮಾರ್ಗಸೂಚಿಗಳನ್ನು (ಎಸ್‌ಒಪಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಪಿಎಲ್‌ನ 10 ಫ್ರಾಂಚೈಸಿಗಳಿಗೂ ಭಾಗಶಃ ಅನ್ವಯಗೊಳಿಸಿದೆ. ಇದರಲ್ಲಿ ಪ್ರಮುಖ ಎಂದರೆ ಎಲ್ಲ ಆಟಗಾರರೂ ಟೀಮ್ ಬಸ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ.
ಪಂದ್ಯದ ದಿನ ಮತ್ತು ಪಂದ್ಯವಿಲ್ಲದ ದಿನಗಳಲ್ಲೂ ಆಟಗಾರರ ಕುಟುಂಬ ಸದಸ್ಯರಿಗೆ ಡ್ರೆಸಿಂಗ್ ರೂಮ್‌ಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಭಾರತ ತಂಡ, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾಕ್ಕೆ ಸರಣಿ ಸೋತ ನಂತರ ಬಿಸಿಸಿಐ, ಭಾರತ ತಂಡಕ್ಕೆ ಕೆಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿತ್ತು.
ಆದರೆ ಅದೇ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಬಹುತಂಡಗಳು ಇರುವ ಐಪಿಎಲ್‌ಗೆ ಅನ್ವಯಿಸುವುದು ಕಷ್ಟಸಾಧ್ಯವಾಗಿದ್ದು, ಕೆಲವನ್ನು ವಿಶ್ವದ ಅತಿ ಶ್ರೀಮಂತ ಟಿ20 ಲೀಗ್‌ನಲ್ಲಿ ಜಾರಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
‘ಆಟಗಾರರು ಪ್ರಾಕ್ಟೀಸ್‌ಗೆ ಬರುವಾಗ ಟೀಮ್ ಬಸ್‌ಅನ್ನೇ ಬಳಸಬೇಕು. ತಂಡಗಳು ಎರಡು ಬ್ಯಾಚ್‌ಗಳಲ್ಲಿ ಪ್ರಯಾಣಿಸಬಹುದು’ ಎಂದು ಐಪಿಎಲ್‌ನ ಎಲ್ಲ ಟೀಮ್ ಮ್ಯಾನೇಜರ್‌ಗಳಿಗೆ ನೀಡಲಾಗಿರುವ ಪತ್ರದಲ್ಲಿ ತಿಳಿಸಲಾಗಿದೆ. ಕುಟುಂಬ ಸದಸ್ಯರು ತರಬೇತಿ ಅವಧಿಯಲ್ಲೂ ಡ್ರೆಸಿಂಗ್ ರೂಮ್ ಪ್ರವೇಶಿಸುವ ಹಾಗಿಲ್ಲ ಎಂದೂ ತಿಳಿಸಲಾಗಿದೆ.
‘ತಾಲೀಮಿನ ದಿನ (ಟೂರ್ನಿಗೆ ಮೊದಲು ಮತ್ತು ಟೂರ್ನಿಯ ವೇಳೆ) ಕೇವಲ ಮಾನ್ಯತೆ ಪಡೆದ ಸಿಬ್ಬಂದಿ ಮಾತ್ರ ಡ್ರೆಸಿಂಗ್ ರೂಮ್ ಮತ್ತು ಅಂಗಳಕ್ಕೆ ಪ್ರವೇಶ ಮಾಡಬಹುದು. ಆಟಗಾರರ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ಬೇರೆ ವಾಹನದಲ್ಲಿ ಬಂದು ಮೀಸಲಿರಿಸಿದ (ಹಾಸ್ಪಿಟಾಲಿಟಿ ಏರಿಯಾ) ಜಾಗದಿಂದ ಪ್ರಾಕ್ಟೀಸ್ ನೋಡಬಹುದು’ ಎಂದು ತಿಳಿಸಲಾಗಿದೆ.
ಹೆಚ್ಚುವರಿ ನೆರವು ಸಿಬ್ಬಂದಿಯ ಪಟ್ಟಿಯನ್ನು (ಥ್ರೊ ಡೌನ್ ಸ್ಪೆಷಲಿಸ್ಟ್‌ಗಳು/ ನೆಟ್ ಬೌಲರ್‌ಗಳು) ಅನುಮೋದನೆಗಾಗಿ ಬಿಸಿಸಿಐಗೆ ಸಲ್ಲಿಸುವುದು ಕಡ್ಡಾಯ. ಅನುಮೋದನೆಯಾದ ಮೇಲೆ ಪಂದ್ಯವಿಲ್ಲದ ದಿನ ಅವರಿಗೆ ಅಕ್ರಡಿಟೇಷನ್ ನೀಡಲಾಗುತ್ತದೆ.
ಪ್ರಾಂಚೈಸಿಯೊಂದರ ಉನ್ನತ ಅಧಿಕಾರಿ, ಬಿಸಿಸಿಐನ ಕ್ರಮವನ್ನು ಸ್ವಾಗತಿಸಿದರು. ‘ನಮ್ಮ ಪ್ರಾಂಚೈಸಿಯಲ್ಲಿ ಕುಟುಂಬ ಸದಸ್ಯರಿಗೆ ಮಾತ್ರವಲ್ಲ, ತಂಡದ ಮಾಲೀಕರಿಗೂ ಡ್ರೆಸಿಂಗ್ ರೂಮ್ ಪ್ರವೇಶಕ್ಕೆ ಅವಕಾಶ ನೀಡುತ್ತಿರಲಿಲ್ಲ. ಕೆಲವರು ಪಂದ್ಯದ ನಂತರ ಸ್ವಂತ ವಾಹನದಲ್ಲಿ ತೆರಳುತ್ತಿದ್ದರು. ಈ ಋತುವಿನಿಂದ ಅದಕ್ಕೂ ಅವಕಾಶ ಇರುವುದಿಲ್ಲ’ ಎಂದು ಅವರು ಪಿಟಿಐಗೆ ತಿಳಿಸಿದರು.
ಪಂದ್ಯದ ದಿನ ಗುರುತು ಪತ್ರ (ಅಕ್ರಡಿಟೇಷನ್ ಕಾರ್ಡ್) ಮರೆತು ಬಂದ ಆಟಗಾರರಿಗೆ ಆರಂಭದಲ್ಲಿ ಎಚ್ಚರಿಕೆ, ನಂತರ ದಂಡ ವಿಧಿಸಲಾಗುತ್ತದೆ. ಅವರು ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಬರುವಾಗ ಸಡಿಲ ಮತ್ತು ಸ್ಲೀವ್‌ಲೆಸ್ ಧಿರಿಸು ಧರಿಸುವಂತಿಲ್ಲ ಎಂದೂ ತಿಳಿಸಲಾಗಿದೆ.
ಅಭ್ಯಾಸದ ವೇಳೆ ಬೌಂಡರಿಯಾಚೆಗಿನ ಎಲ್‌ಇಡಿ ಬೋರ್ಡ್‌ಗಳಿಗೆ ಚೆಂಡನ್ನು ಹೊಡೆಯುವಂತಿಲ್ಲ ಎಂದು ಬ್ಯಾಟರ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ‘ಇದಕ್ಕಾಗಿ ನೆಟ್‌ಗಳನ್ನು ನೀಡಿದ್ದರೂ, ಕೆಲವರು ಎಲ್‌ಇಡಿ ಬೋರ್ಡ್‌ಗಳಿಗೆ ಚೆಂಡನ್ನು ಹೊಡೆದಟ್ಟುತ್ತಿದ್ದಾರೆ. ತಂಡಗಳು ನಿಯಮಗಳಿಗೆ ಬದ್ಧವಾಗಿರಬೇಕು. ಜೊತೆಗೆ ಆಟಗಾರರು ಮತ್ತು ನೆರವು ಸಿಬ್ಬಂದಿ ಎಲ್‌ಇಡಿ ಬೋರ್ಡ್‌ಗಳ ಎದುರು ಕುಳಿತುಕೊಳ್ಳಬಾರದು’ ಎಂದೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.