ADVERTISEMENT

IPL 2025 | SRH vs PBKS: ಜಯಕ್ಕಾಗಿ ಕಾತರಿಸಿರುವ ಸನ್‌ರೈಸರ್ಸ್‌

ಹೈದರಾಬಾದ್ ತಂಡಕ್ಕೆ ಪಂಜಾಬ್ ಕಿಂಗ್ಸ್‌ ಸವಾಲು ಇಂದು; ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ಯಾಟ್ ಕಮಿನ್ಸ್ ಬಳಗ

ಪಿಟಿಐ
Published 12 ಏಪ್ರಿಲ್ 2025, 0:30 IST
Last Updated 12 ಏಪ್ರಿಲ್ 2025, 0:30 IST
ಪ್ಯಾಟ್ ಕಮಿನ್ಸ್ 
ಪ್ಯಾಟ್ ಕಮಿನ್ಸ್    

ಹೈದರಾಬಾದ್: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ರನ್ ಹೊಳೆ ಹರಿಸಿ ಎದುರಾಳಿಗಳನ್ನು ನಡುಗಿಸುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಈ ಬಾರಿ ಸತತ ನಾಲ್ಕು ಸೋಲುಗಳಿಂದ ಬಸವಳಿದಿದೆ. 

ಶನಿವಾರ ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು ಬಲಿಷ್ಠ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.  ಹೈದರಾಬಾದ್ ತಂಡವು ಒಟ್ಟು ಐದು ಪಂದ್ಯಗಳನ್ನು ಆಡಿದೆ. ಗೆದ್ದಿದ್ದು ಮೊದಲ ಪಂದ್ಯದಲ್ಲಿ ಮಾತ್ರ. ಆ ಹಣಾಹಣಿಯಲ್ಲಿ ಶತಕ ಬಾರಿಸಿದ್ದ ಇಶಾನ್ ಕಿಶನ್,  ಬೌಲರ್‌ಗಳಿಗೆ ಬೆವರಿಳಿಸುವ  ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ ಅವರ ಆಟ ರಂಗೇರುತ್ತಿಲ್ಲ.

ತಂಡದ ಅನುಭವಿ ಬೌಲರ್ ಮತ್ತು ನಾಯಕ ಪ್ಯಾಟ್ ಕಮಿನ್ಸ್, ವೇಗಿ ಮೊಹಮ್ಮದ್ ಶಮಿ, ಜಯದೇವ್ ಉನದ್ಕತ್, ಸಿಮ್ರನ್‌ಜೀತ್ ಸಿಂಗ್ ಅವರ ಆಟವೂ ನಡೆಯುತ್ತಿಲ್ಲ. ಜೊತೆಯಾಟಗಳು ಬೆಳೆಯದಂತೆ ತಡೆಯೊಡ್ಡುವ ಪರಿಣಾಮಕಾರಿ ಬೌಲಿಂಗ್ ಹೊರಹೊಮ್ಮುತ್ತಿಲ್ಲ.  

ADVERTISEMENT

ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಸನ್‌ರೈಸರ್ಸ್‌ ತಂಡವನ್ನು ಎದುರಿಸಲು ಸನ್‌ರೈಸರ್ಸ್‌ ವಿಭಿನ್ನವಾದ ತಂತ್ರಗಾರಿಕೆ ಹೆಣೆಯುವುದು ಅನಿವಾರ್ಯ. ಶ್ರೇಯಸ್ ಬಳಗವು ಆಡಿರುವ 4 ಪಂದ್ಯಗಳಲ್ಲಿ 3 ಗೆದ್ದು, 1ರಲ್ಲಿ ಸೋತಿದೆ. 

ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಪಂಜಾಬ್ ತಂಡದ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ ಮಿಂಚಿನ ಶತಕ ಬಾರಿಸಿದ್ದರು. ಆದರೆ ಈ ಪಂದ್ಯದಲ್ಲಿ ಶ್ರೇಯಸ್ ಸಹಿತ ಐವರು ಪ್ರಮುಖ ಬ್ಯಾಟರ್‌ಗಳು ಒಂದಂಕಿಗೆ  ಔಟಾಗಿದ್ದರು. ಆದರೆ ಕೊನೆಯ ಹಂತದ ಓವರ್‌ಗಳಲ್ಲಿ ಶಶಾಂಕ್ ಸಿಂಗ್ ಅರ್ಧಶತಕ ಮತ್ತು ಮಾರ್ಕೋ ಯಾನ್ಸೆನ್ ಉಪಯುಕ್ತ ಕಾಣಿಕೆಯಿಂದಾಗಿ ತಂಡವು ಇನ್ನೂರರ ಗಡಿ ದಾಟಿತ್ತು. ಬೌಲಿಂಗ್‌ನಲ್ಲಿ ಲಾಕಿ ಫರ್ಗ್ಯುಸನ್, ಯಶ್ ಠಾಕೂರ್ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು  ಉತ್ತಮ ಲಯದಲ್ಲಿದ್ದಾರೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್. 

ಶ್ರೇಯಸ್ ಅಯ್ಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.