ಟೆಸ್ಟ್ ಪಂದ್ಯಗಳಿಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಟೆಸ್ಟ್ ಜರ್ಸಿಯಾದ ಬಿಳಿಬಣ್ಣದ ಟೀಶರ್ಟ್ ಧರಿಸಿ ಗೌರವ ಸಲ್ಲಿಸಿದರು
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಶನಿವಾರ ಕೆಂಪು ವರ್ಣದ ಅಲೆ ಇರಲಿಲ್ಲ. ಆದರೆ ಅಚ್ಚ ಬಿಳಿ ಬಣ್ಣ ಪಸರಿಸಿತ್ತು. ಶ್ವೇತವರ್ಣದ ಪೋಷಾಕುಗಳ ಮೇಲೆ ‘ಹದಿನೆಂಟು’ ಎಂಬ ಸಂಖ್ಯೆ ಫಳಗುಟ್ಟುತ್ತಿತ್ತು.
ಆದರೆ ಆ ಪೋಷಾಕುಗಳನ್ನು ತೊಟ್ಟು ಬಂದಿದ್ದ ಸಾವಿರಾರು ಕ್ರಿಕೆಟ್ ಪ್ರಿಯರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಐಪಿಎಲ್ ಪಂದ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಮಳೆರಾಯ ನೀಡಲಿಲ್ಲ. ಇದರಿಂದಾಗಿ ಪಂದ್ಯ ರದ್ದಾಯಿತು. ಉಭಯ ತಂಡ
ಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಇದರೊಂದಿಗೆ ಕೋಲ್ಕತ್ತ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಲು ಇದ್ದ ಸಣ್ಣ ಅವಕಾಶವೂ ಕೊಚ್ಚಿ ಹೋಯಿತು. ಆತಿಥೇಯ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಶುರುವಾದ ಮಳೆಯಿಂದಾಗಿ ರಾತ್ರಿ 10 ಗಂಟೆ ದಾಟಿದರೂ ಬರುತ್ತಲೇ ಇತ್ತು. ಒಮ್ಮೆ ಜೋರಾಗಿ, ಮತ್ತೊಮ್ಮೆ ಮೆಲ್ಲಗೆ ಸುರಿಯುತ್ತಲೇ ಇತ್ತು. ಆದರೆ ಸಂಪೂರ್ಣವಾಗಿ ವಿರಮಿಸಲೇ ಇಲ್ಲ. ಇದರಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಪಂದ್ಯದ ಟಾಸ್ ಕೂಡ ಹಾಕಲು ಸಾಧ್ಯವಾಗಲಿಲ್ಲ. ಪಿಚ್ ಮೇಲೆ ಹಾಕಿದ್ದ ಹೊದಿಕೆಯನ್ನು ಸರಿಸಲು ಆಗಲಿಲ್ಲ. ಉಭಯ ತಂಡಗಳ ಆಟಗಾರರು ಡ್ರೆಸ್ಸಿಂಗ್ ರೂಮ್‌ನಲ್ಲಿ ಹರಟೆ ಹೊಡೆಯುತ್ತ ಕೂತಿದ್ದರು.
ಆಗೊಮ್ಮೆ, ಈಗೊಮ್ಮೆ ಮೈದಾನದ ದೊಡ್ಡ ಪರದೆಯಲ್ಲಿ ಅವರನ್ನು ತೋರಿಸಿದಾಗಲೆಲ್ಲ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ಡಿ.ಜೆ. ಸಂಗೀತ ನಿರಂತರವಾಗಿ ಮೊಳಗುತ್ತಿತ್ತು.
ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದ ಕಾರಣದಿಂದ ಸುಮಾರು ಎಂಟು ದಿನಗಳಿಂದ ಐಪಿಎಲ್ ಸ್ಥಗಿತ ವಾಗಿತ್ತು. ಆರ್‌ಸಿಬಿ ಮತ್ತು ಕೆಕೆಆರ್ ಪಂದ್ಯವು ಐಪಿಎಲ್ ಪುನರಾರಂಭದ ಮೊದಲ ಹಣಾಹಣಿಯೂ ಆಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಜಯಿಸಿದರೆ ಪ್ಲೇಆಫ್ ಖಚಿತವಾಗುತ್ತಿತ್ತು. ತಂಡಕ್ಕೆ ಇನ್ನೆರಡು ಪಂದ್ಯಗಳು ಬಾಕಿಯಿದ್ದು ಗುರಿ ಕಷ್ಟವೇನಿಲ್ಲ.
ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಅಭಿಮಾನಿಗಳು ಇಲ್ಲಿ ಕಿಕ್ಕಿರಿದು ಸೇರಿದ್ದು ತಮ್ಮ ನೆಚ್ಚಿನ ವಿರಾಟ್ ಕೊಹ್ಲಿಗಾಗಿ. ಈಚೆಗಷ್ಟೇ ಕೊಹ್ಲಿ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದ್ದರು.ಈ ದಿಗ್ಗಜ ಆಟಗಾರನಿಗೆ ಬೆಂಗಳೂರು ಒಂದು ರೀತಿಯಲ್ಲಿ ತವರುಮನೆಯೇ ಆಗಿದೆ. 18 ವರ್ಷಗಳಿಂದ ಅವರು ಆರ್‌ಸಿಬಿ
ಯಲ್ಲಿ ಆಡುತ್ತಿದ್ದಾರೆ. ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇಲ್ಲಿದ್ದಾರೆ.
ಆದ್ದರಿಂದಾಗಿ ವಿರಾಟ್ ಅವರಿಗೆ ಅಭಿನಂದನೆ ಸಲ್ಲಿಸಲು ಆರ್‌ಸಿಬಿ ಅಭಿಮಾನಿಗಳು ಬಿಳಿ ಪೋಷಾಕು ತೊಟ್ಟು ಬಂದಿದ್ದರು. ಜೆರ್ಸಿಯ ಹಿಂಭಾಗದಲ್ಲಿ ‘ಎಂಡ್ ಆಫ್ ಎನ್ ಎರಾ’ (ಒಂದು ಯುಗಾಂತ್ಯ) ಎಂಬ ಒಕ್ಕಣೆಯೂ ಇತ್ತು. ಕೆಲವು ಅಭಿಮಾನಿಗಳು ಬ್ಯಾನರ್‌ಗಳನ್ನೂ ಮಾಡಿಸಿಕೊಂಡು ಬಂದಿದ್ದರು. ಆದರೆ ಮಳೆ ನಿಲ್ಲಲಿಲ್ಲ, ಪಂದ್ಯ ಆರಂಭ ವಾಗಲಿಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಹುತೇಕರ ಉತ್ಸಾಹ ವೂ ಕಡಿಮೆಯಾಗಲಿಲ್ಲ. ಮಳೆ, ಚಳಿಗಾಳಿ ಯನ್ನೂ ಲೆಕ್ಕಿಸದೇ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.