ADVERTISEMENT

IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:48 IST
Last Updated 12 ಫೆಬ್ರುವರಿ 2026, 23:48 IST
ಚಿನ್ನಸ್ವಾಮಿ ಕ್ರೀಡಾಂಗಣ ಪ್ರಜಾವಾಣಿ
ಚಿನ್ನಸ್ವಾಮಿ ಕ್ರೀಡಾಂಗಣ ಪ್ರಜಾವಾಣಿ   

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಷರತ್ತುಬದ್ಧ ಅನುಮತಿ ನೀಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ, ‘ನ್ಯಾಯಮೂರ್ತಿ ಮೈಕಲ್‌ ಕುನ್ಹ ತನಿಖಾ ಆಯೋಗ ಮತ್ತು ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿದ್ದ ವರದಿಗಳನ್ನು ಪರಿಶೀಲಿಸಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಈ ಸಂಬಂಧ ವಿಶೇಷ ಆದೇಶ ಹೊರಡಿಸಲು ಗೃಹ ಇಲಾಖೆಗೆ ಅಧಿಕಾರ ನೀಡಲಾಗಿದೆ. ತನಿಖಾ ಆಯೋಗ ಮತ್ತು ತಜ್ಞರ ಸಮಿತಿಯ ಶಿಫಾರಸುಗಳನ್ನು ಗಮನದಲ್ಲಿ ಇರಿಸಿಕೊಂಡು ಗೃಹ ಇಲಾಖೆಯು ಷರತ್ತುಗಳನ್ನು ರೂಪಿಸಲಿದೆ. ಮುಂದಿನ ಎರಡು–ಮೂರು ದಿನಗಳಲ್ಲಿ ಷರತ್ತು ಬದ್ಧ ಆದೇಶವನ್ನು ಇಲಾಖೆಯು ಹೊರಡಿಸಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಹಿಂದಿನ ಐಪಿಎಲ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಮೇ 3ರಂದು ಜಯ ಸಾಧಿಸಿತ್ತು. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡವು ಮೊದಲ ಬಾರಿ ಕಪ್‌ ಗೆದ್ದ ಸಂಭ್ರಮಾಚರಣೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು.

ಭಾರಿ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ಈ ಅವಘಡದ ನಂತರ ಸರ್ಕಾರವು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳನ್ನು ಆಯೋಜಿಸುವ ಅನುಮತಿಯನ್ನು ವಾಪಸ್‌ ಪಡೆದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.