ಕೋಲ್ಕತ್ತ: ಇದೇ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ಆಯೋಜಿಸಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 13ನೇ ಆವೃತ್ತಿಯ ಆಟಗಾರರ ಹರಾಜು ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ.
ಪೌರತ್ವ ಕಾಯಿದೆ ಪರ–ವಿರೋಧಗಳ ಪ್ರತಿಭಟನೆಗಳ ‘ಬಿಸಿ’ಯಾಗಿರುವ ಬಂಗಾಳ ರಾಜಧಾನಿಯಲ್ಲಿ ನಡೆಯಲಿರುವ ಈ ಬಿಡ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೌಲ್ಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ವರ್ಷದ ಐಪಿಎಲ್ ಟೂರ್ನಿಯನ್ನು ವಿಶ್ವಕಪ್ ಟೂರ್ನಿಯ ಪೂರ್ವಭಾವಿ ಅಭ್ಯಾಸದ ವೇದಿಕೆಯನ್ನಾಗಿ ಮಾಡಿಕೊಳ್ಳುವ ಉತ್ಸಾಹದಲ್ಲಿಯೂ ಕೆಲವು ಆಟಗಾರರಿದ್ದಾರೆ.
ಇದೆಲ್ಲದರ ನಡುವೆ ಅಫ್ಗಾನಿಸ್ತಾನದ ನೂರ್ ಅಹಮದ್ (14 ವರ್ಷ, 350ದಿನ) ಈ ಬಿಡ್‌ನಲ್ಲಿ ಸ್ಪರ್ಧೆಯಲ್ಲಿರುವ ಅತ್ಯಂಕ ಕಿರಿಯ ವಯಸ್ಸಿನ ಆಟಗಾರ. ಕಳೆದ ಕೆಲವು ವರ್ಷಗಳಿಂದ ಅಫ್ಗನ್ ಆಟಗಾರರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಅವರು ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಹಾದಿಯಲ್ಲಿ ಸಾಗುವ ಕನಸು ನೂರ್ ಕಂಗಳಲ್ಲಿದೆ.
ಭಾರತದ 17ರ ಪೋರ, ಮುಂಬೈನ ಯಶಸ್ವಿ ಜೈಸ್ವಾಲ್, ಪ್ರಿಯಂ ಗರ್ಗ್, ತಮಿಳುನಾಡಿನ ಆರ್. ಸಾಯಿಕಿಶೋರ್, ಬಂಗಾಳದ ಮಧ್ಯಮವೇಗಿ ಇಶಾನ್ ಪೊರೆಲ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಅವರಿಗೆ ತಲಾ ₹ 20 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿದೆ.
ನಾಲ್ಕು ದಿನಗಳ ಹಿಂದಷ್ಟೇ ಚೆನ್ನೈನಲ್ಲಿ ಭಾರತದ ಎದುರು ಅಬ್ಬರದ ಶತಕ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಶಿಮ್ರೊನ್ ಹೆಟ್ಮೆಯರ್ ಅವರಿಗೆ ಬೇಡಿಕೆ ಕುದುರುವ ನಿರೀಕ್ಷೆ ಇದೆ. ಹೋದ ವರ್ಷದ ಟೂರ್ನಿಯಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಆದರೆ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಈ ಬಾರಿ ತಂಡದಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿದೆ. ವಿಂಡೀಸ್‌ನ ವೇಗಿ ಕೆಸ್ರಿಕ್ ವಿಲಿಯಮ್ಸ್ ಅವರಿಗೂ ಇಷ್ಟೇ ಮೂಲಮೌಲ್ಯ ಇಡಲಾಗಿದೆ.
ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಜೋಶ್ ಹೆಜಲ್‌ವುಡ್, ಕ್ರಿಸ್ ಲಿನ್, ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್, ಶ್ರೀಲಂಕಾದ ಆ್ಯಂಜೆಲೊ ಮ್ಯಾಥ್ಯೂಸ್ ಬಿಡ್ ಯಾದಿಯಲ್ಲಿರುವ ಪ್ರಮುಖರು.ಚೇತೇಶ್ವರ್ ಪೂಜಾರ ಅವರು ಈ ಬಾರಿಯಾದರೂ ಐಪಿಎಲ್‌ನಲ್ಲಿ ಆಡುವರೇ ಎಂಬ ಕುತೂಹಲ ಇದೆ. ಹೋದ ವರ್ಷ ಅವರನ್ನು ಯಾವ ಫ್ರ್ಯಾಂಚೈಸಿಯೂ ಖರೀದಿಸಿರಲಿಲ್ಲ.
ಕಿರಿಯ ಆಟಗಾರ ನೂರ್ ಅಹಮದ್
ಅಫ್ಗಾನಿಸ್ತಾನದ ಪೋರ ನೂರ್ ಅಹಮದ್ ಅವರು ಈ ಹರಾಜಿನಲ್ಲಿ ಸ್ಪರ್ಧಿಸಿರುವ ಅತಿ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ. ಇನ್ನು ಹದಿನೈದು ದಿನ ಕಳೆದರೆ ಹದಿನೈದರ ಹರೆಯಕ್ಕೆ ಕಾಲಿಡುವರು.
ಚೈನಾಮನ್ ಬೌಲರ್ ಆಗಿರುವ ನೂರ್ ಅವರಿಗೆ ₹ 30 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿದೆ. ಇವರು ಯಾವ ಫ್ರ್ಯಾಂಚೈಸ್ ಪಾಲಾಗುವರು ಎಂಬ ಕುತೂಹಲ ಗರಿಗೆದರಿಸಿದೆ.19 ವರ್ಷದೊಳಗಿನವರ ವಿಭಾಗದಲ್ಲಿ ಅವರು ಉತ್ತಮವಾಗಿ ಆಡಿದ್ದರು.
ವೇಗಿಗಳ ಶೋಧದಲ್ಲಿ ಆರ್‌ಸಿಬಿ?
ಪ್ರತಿ ಬಾರಿಯೂ ಪ್ರಶಸ್ತಿ ಜಯಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ತಾರಾ ವರ್ಚಸ್ಸಿನ ಆಟಗಾರರಿಗೆ ಕಡಿಮೆಯೇನಿಲ್ಲ. ಆದರೆ, ಇದುವರೆಗೂ ತಂಡವು ಒಂದು ಸಲವೂ ಪ್ರಶಸ್ತಿ ಗೆದ್ದಿಲ್ಲ.
ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿಯಲ್ಲಿ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಆದರೆ, ಉತ್ತಮ ಮಧ್ಯಮವೇಗಿಗಳ ಕೊರತೆ ಇದೆ. ಈಚೆಗೆ ತನ್ನಲ್ಲಿದ್ದ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಸೇರಿದಂತೆ ಒಂಬತ್ತು ಆಟಗಾರರನ್ನು ಬಿಡುಗಡೆ ಮಾಡಿತ್ತು. 10–12 ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಯುವ ಆಟಗಾರ ದೇವದತ್ತ ಪಡಿಕ್ಕಲ್ ಅವರನ್ನು ಈ ಸಲವೂ ಆರ್‌ಸಿಬಿಯು ಉಳಿಸಿಕೊಂಡಿದೆ. ಬೆಂಗಳೂರಿನ ತಂಡದಲ್ಲಿ ಇರುವ ಕರ್ನಾಟಕದ ಏಕೈಕ ಆಟಗಾರ ಅವರಾಗಿದ್ದಾರೆ.
ಉತ್ತಪ್ಪಗೆ ಕುದುರುವುದೇ ಬೇಡಿಕೆ?
ಕೊಡಗಿನ ರಾಬಿನ್ ಉತ್ತಪ್ಪ ಅವರುಈ ಐಪಿಎಲ್‌ನಲ್ಲಿ ಯಾವ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಕುತೂಹಲ ಇದೆ. ಅವರಿಗೆ ₹ 1.5ಕೋಟಿ ನಿಗದಿ ಮಾಡಲಾಗಿದೆ.ಹೋದ ಋತುಗಳಲ್ಲಿ ಅವರು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಉಪನಾಯಕನಾಗಿ ಆಡಿದ್ದರು.
ದೇಶಿ ಕ್ರಿಕೆಟ್‌ನಲ್ಲಿ 34 ವರ್ಷದ ರಾಬಿನ್ ಅವರು ಈಗ ಕೇರಳ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಈಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅವರು ಆರು ಪಂದ್ಯಗಳಲ್ಲಿ ಆಡಿ 139 ರನ್ ಪೇರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.