ADVERTISEMENT

IPL Auction 2023 Highlights: ಸ್ಯಾಮ್‌ ಕರನ್‌ಗೆ ಬಂಪರ್

ಭಾರತದ ಆಟಗಾರರಲ್ಲಿ ಅಗರವಾಲ್‌ಗೆ ಅಗ್ರಮೌಲ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:15 IST
Last Updated 23 ಡಿಸೆಂಬರ್ 2022, 22:15 IST
ಸ್ಯಾಮ್ ಕರನ್ ಹಾಗೂ ಬೆನ್ ಸ್ಟೋಕ್ಸ್
ಸ್ಯಾಮ್ ಕರನ್ ಹಾಗೂ ಬೆನ್ ಸ್ಟೋಕ್ಸ್   

ಕೊಚ್ಚಿ/ನವದೆಹಲಿ: ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಂತ ದುಬಾರಿ ಮೌಲ್ಯಕ್ಕೆ ಖರೀದಿಯಾದ ಆಟಗಾರನೆಂಬ ದಾಖಲೆ ಬರೆದರು.

ಕನ್ನಡಿಗ ಮಯಂಕ್ ಅಗರವಾಲ್ ಈ ಬಾರಿ ಅತಿ ಹೆಚ್ಚು ಮೌಲ್ಯ ಗಳಿಸಿದ ಭಾರತದ ಆಟಗಾರನಾಗಿ ಹೊರಹೊಮ್ಮಿದರು.ಗುರುವಾರ ಕೊಚ್ಚಿಯಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ₹ 18.5 ಕೊಟಿಗೆ ಕರನ್ ಅವರನ್ನು ಖರೀದಿಸಿತು. ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್‌ ಮತ್ತು ಪಂಜಾಬ್ ತಂಡಗಳು ಭಾರಿ ಪೈಪೋಟಿ ನಡೆಸಿದವು. ಕೊನೆಯಲ್ಲಿ ಪಂಜಾಬ್ ತಂಡವು ಮೇಲುಗೈ ಸಾಧಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಗಳಿಸಿದ ಆಟಗಾರನಾದರು. 2021ರಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೊರಿಸ್ ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡವು ₹ 16.25 ಕೋಟಿ ಮೌಲ್ಯ ನೀಡಿದ್ದು ಇದುವರೆಗಿನ ದಾಖಲೆಯಾಗಿತ್ತು.

‘ಕಳೆದ ರಾತ್ರಿ ನನಗೆ ನಿದ್ದೆಯೇ ಬಂದಿಲ್ಲ. ಹರಾಜು ಪ್ರಕ್ರಿಯೆಯ ಬಗ್ಗೆ ಬಹಳಷ್ಟು ಕುತೂಹಲ ಮೂಡಿತ್ತು. ನನ್ನ ನಿರೀಕ್ಷೆ ಮೀರಿದ ಮೌಲ್ಯ ಲಭಿಸಿದೆ. ತಂಡದ ಮ್ಯಾನೇಜ್‌ಮೆಂಟ್ ತೋರಿರುವ ವಿಶ್ವಾಸಕ್ಕೆ ಆಭಾರಿಯಾಗಿರುವೆ’ ಎಂದು ಸ್ಯಾಮ್ ಸ್ಟಾರ್ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿದರು.

ADVERTISEMENT

2019ರಲ್ಲಿ ಸ್ಯಾಮ್ ಐಪಿಎಲ್‌ಗೆ ಪಂಜಾಬ್ (ಆಗಿನ ಕಿಂಗ್ಸ್ ಇಲೆವನ್ ಪಂಜಾಬ್) ತಂಡದ ಮೂಲಕವೇ ಆಗಿತ್ತು. ಇದೀಗ ಮತ್ತೆ ಅಲ್ಲಿಗೆ ಮರಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿಯೂ ಮಿಂಚಿದ್ದರು.

ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ₹ 17.5 ಕೋಟಿ ಪಡೆಯುವುದರೊಂದಿಗೆ ಎರಡನೇ ಗರಿಷ್ಠ ಮೌಲ್ಯ ಗಳಿಸಿದ ಆಟಗಾರನಾದರು. ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತು.

ಮುಂಬೈಕರ್ ಅಜಿಂಕ್ಯ ರಹಾನೆ ತಮ್ಮ ಮೂಲಬೆಲೆ (₹ 50ಲಕ್ಷ) ಪಡೆದು ಚೆನ್ನೈ ತಂಡಕ್ಕೆ ಸೇರ್ಪಡೆಯಾದರೆ, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಮೂಲಬೆಲೆ ₹2 ಕೋಟಿಗೆ ಗುಜರಾತ್ ಟೈಟನ್ಸ್‌ ಪಾಲಾದರು.

ಚೆನ್ನೈಗೆ ಸ್ಟೋಕ್ಸ್‌: ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಅವರನ್ನು ತನ್ನ ತೆಕ್ಕೆಗೆ ಸೆಳೆಯುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿಯಾಯಿತು. ಅನುಭವಿಗಳನ್ನು ಆಯ್ಕೆ ಮಾಡಿಕೊಂಡು ತಂಡ ಕಟ್ಟುವ ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಮತ್ತು ಆಡಳಿತ ಮಂಡಳಿಯವರ ಯೋಜನೆ ಫಲಿಸಿತು. ಸ್ಟೋಕ್ಸ್‌ ಅವರನ್ನು (₹ 16.25 ಕೋಟಿ) ಖರೀದಿಸಿತು. ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸ್ಟೋಕ್ಸ್‌ ಖರೀದಿಗಾಗಿ ನಿಕಟ ಪೈಪೋಟಿಯೊಡ್ಡಿತ್ತು.ಇಂಗ್ಲೆಂಡ್ ತಂಡದ ಹೊಸಪ್ರತಿಭೆ ಹ್ಯಾರಿ ಬ್ರೂಕ್ಸ್‌ ₹13.25 ಕೋಟಿ ಗಳಿಸುವಲ್ಲಿ ಯಶಸ್ವಿಯಾದರು. ಅವರು ಈಚೆಗೆ ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಯಲ್ಲಿ ಮೂರು ಶತಕ ಬಾರಿಸಿದ್ದರು. ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ಖರೀದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.