
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಹಲವು ಅನ್‌ಕ್ಯಾಪ್ಡ್ ಆಟಗಾರರು ಉತ್ತಮ ಬೆಲೆ ಪಡೆದರೆ, ಹಲವು ಸ್ಟಾರ್ ಆಟಗಾರರು ಖರೀದಿಯಾಗದೇ ಉಳಿದರು.
ಹೆಚ್ಚಿನ ಫ್ರಾಂಚೈಸಿಗಳು ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು ಹಾಗೂ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಮಣೆ ಹಾಕಿದವು.
ಫಾರ್ಮ್‌ನಲ್ಲಿ ಇಲ್ಲದ ಪ್ರಮುಖ ವಿದೇಶಿ ಆಟಗಾರರು ಹಾಗೂ ಭಾರತದ ಪರ ಆಡಿದ್ದ ಕೆಲವು ಆಟಗಾರರನ್ನು ಯಾವುದೇ ಫ್ರಾಂಚೈಸಿಗಳು ಖರೀದಿ ಮಾಡಲು ಮುಂದೆ ಬರಲಿಲ್ಲ.
ಡೆವೊನ್ ಕಾನ್ವೇ: ₹2 ಕೋಟಿ ಮೂಲಬೆಲೆ ಹೊಂದಿದ್ದ ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್ವೇ ಅವರನ್ನು ಯಾವ ತಂಡವೂ ಕೂಡ ಖರೀದಿಸಲಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿರುವ ಕಾನ್ವೇ, ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.
ಜಾನಿ ಬೆಸ್ಟೊ: ₹2 ಕೋಟಿ ಮೂಲಬೆಲೆ ಹೊಂದಿದ್ದ ಇಂಗ್ಲೆಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೆಸ್ಟೊ ಕೂಡ ಮಿನಿ ಹರಾಜಿನಲ್ಲಿ ಖರೀದಿಯಾಗಲಿಲ್ಲ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಅವರು ಆಡಿದ್ದರು.
ವಿಜಯ್ ಶಂಕರ್: ಐಪಿಎಲ್‌ನಲ್ಲಿ ₹30 ಲಕ್ಷ ಮೂಲಬೆಲೆ ಹೊಂದಿದ್ದ ಭಾರತದ ಆಲ್‌ರೌಂಡರ್ ವಿಜಯ್ ಶಂಕರ್ ಅವರನ್ನು ಕೂಡ ಯಾವ ತಂಡವೂ ಖರೀದಿಸಲಿಲ್ಲ. ಅವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಜೈಂಟ್ಸ್ ತಂಡಗಳ ಪರ ಆಡಿದ್ದರು.
ಕರಣ್ ಶರ್ಮಾ: ₹50 ಲಕ್ಷ ಮೂಲಬೆಲೆ ಹೊಂದಿದ್ದ ಭಾರತದ ಸ್ಪಿನ್ ಬೌಲರ್ ಕರಣ್ ಶರ್ಮಾ ಅವರು ಕೂಡ ಖರೀದಿಯಾಗದೇ ಉಳಿದರು. ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಆರ್‌ಸಿಬಿ ಪರ ಅವರು ಆಡಿದ್ದರು.
ವಿಯಾನ್ ಮುಲ್ಡರ್: ₹1 ಕೋಟಿ ಮೂಲಬೆಲೆ ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ಆಲ್‌ರೌಂಡರ್ ವಿಯಾನ್ ಮುಲ್ಡರ್ ಅವರನ್ನು ಕೂಡ ಯಾವುದೇ ತಂಡ ಖರೀದಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.